ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಭುಗಿಲೆದ್ದಿರುವ ವೇಳೆ ಭಾರತದ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಕೇಂದ್ರ ಸರಕಾರ ಕಾಳಜಿ ವಹಿಸಿದೆ.
ವಿದೇಶಾಂಗ ಇಲಾಖೆ ವಕ್ತಾರ(MEA Spokesperson) ರಣಧೀರ್ ಜೈಸ್ವಾಲ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದು’ “ನಿಮಗೆ ತಿಳಿದಿರುವಂತೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಮ್ಮ ಸುಮಾರು 8500 ವಿದ್ಯಾರ್ಥಿಗಳು ಮತ್ತು ಸುಮಾರು 15,000 ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಎಲ್ಲರಿಗೂ ಹೈಕಮಿಷನ್ ಮತ್ತು ನಮ್ಮ ಸಂಪರ್ಕದಲ್ಲಿರಲು, ಪ್ರಯಾಣ ಸಲಹೆಯನ್ನು ನೀಡಿದ್ದೇವೆ. ಅವರಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ವಿದೇಶಾಂಗ ಸಚಿವರೇ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಮ್ಮ ಎಲ್ಲಾ ಪ್ರಜೆಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.
ಬಾಂಗ್ಲಾ ಹಿಂಸಾಚಾರದಲ್ಲಿ ಇದುವರೆಗೆ 39 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಗುರುವಾರ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿದ್ದು, ಪ್ರತಿಭಟನಾಕಾರರು ಢಾಕಾದಲ್ಲಿನ ಸರ್ಕಾರಿ ಸುದ್ದಿ ವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿ ಹಲವಾರು ವಾಹನಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದಲ್ಲೂ ಪ್ರತಿಭಟನೆ
ಮೀಸಲಾತಿ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹಲವು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಶುಕ್ರವಾರ ಕೋಲ್ಕತಾದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿವೆ.