ಪುಣೆ, ಆ. 2: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪುಣೆಗೆ ಭೇಟಿ ನೀಡಿದ ಒಂದು ದಿನದ ಬಳಿಕ, ತಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸರಕಾರ ನಿರ್ಲಕ್ಷಿಸುತ್ತಿರುವ ವಿರುದ್ಧ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಸಂದರ್ಭ ನಮ್ಮ ಸಮಸ್ಯೆಗಳನ್ನು ಸರಕಾರವು ನಿರ್ಲಕ್ಷಿಸುತ್ತಿದೆ ಎಂದು ಭಾರತೀಯ ವೈದ್ಯಕೀಯ ಅಸೋಯೇಶನ್ (ಐಎಂಎ) ಮಹಾರಾಷ್ಟ್ರ ಘಟಕವು ಆಪಾದಿಸಿದೆ. ಸಣ್ಣ ನರ್ಸಿಂಗ್ ಹೋಂಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಮಾಡುವ ಜಿಲ್ಲಾಡಳಿತದ ನಿರ್ಧಾರದ ಕುರಿತು ಅಸೋಸಿಯೇಶನ್ ಅಸಮಾಧಾನ ವ್ಯಕ್ತಪಡಿಸಿ, ಇದು ಕೊರೊನಾ ಅಲ್ಲದ ರೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದಿದೆ.
ವೈದ್ಯರನ್ನು ಮೂರ್ಖರನ್ನಾಗಿಸುತ್ತಿರುವ ಸರಕಾರ : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಅವಿನಾಶ್ ಭೋಂಡ್ವೆ ಅವರು ಮಾತನಾಡಿ, ಕೋವಿಡ್ ನಿಯಂತ್ರಣ ಕ್ರಮಗಳ ಮೇಲ್ವಿಚಾರಣೆಗಾಗಿ ಮಹಾ ಸಿಎಂ ಪುಣೆಗೆ ಭೇಟಿ ನೀಡಿದರು. ಈ ಸಂದರ್ಭ ಅವರು ವೈದ್ಯರನ್ನು ಭೇಟಿಯಾಗುತ್ತಾರೆ ಎಂದು ಭಾವಿಸಿದ್ದೇವೆ. ಆದರೆ ಈ ವಿಷಯದಲ್ಲಿ ನಾವು ಎಷ್ಟು ಮೂರ್ಖರಾಗಿದ್ದೇವೆ ಎಂಬುದು ನಮಗೆ ಅರಿವಾಗಿದೆ. ಸರಕಾರದ ದೃಷ್ಟಿಕೋನದಲ್ಲಿ ವೈದ್ಯರು ಏನೂ ಮಾಡುತ್ತಿಲ್ಲ ಎಲ್ಲ ಕೆಲಸಗಳನ್ನು ಮಂತ್ರಿಗಳು ಮತ್ತು ನಿರ್ವಾಹಕರು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಭಾವಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಅನುದಾನ ಯಾಕಿಲ್ಲ : ಆಸ್ಪತ್ರೆಯ ಶುಲ್ಕ ಕುರಿತು ಐಎಂಎ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಭೋಂಡ್ವೆ ಹೇಳಿದ್ದಾರೆ. ಸರಕಾರ ನಿಜವಾದ ಆಸ್ಪತ್ರೆಗಳ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಖಾಸಗಿ ಆಸ್ಪತ್ರೆಗಳ ಶುಲ್ಕವನ್ನು ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಸರಕಾರದಿಂದ ಯಾವುದೇ ಅನುದಾನ ಅಥವಾ ಆರ್ಥಿಕ ಸಹಾಯ ಪಡೆಯುವುದಿಲ್ಲ. ಬದಲಾಗಿ ಕೆಲವು ಹೆಚ್ಚುವರಿ ತೆರಿಗೆಗಳನ್ನು ಆಸ್ಪತ್ರೆಗಳಿಗೆ ಅನ್ವಯಿಸಲಾಗುತ್ತದೆ. ಐಸಿಯುಗೆ ದಿನಕ್ಕೆ ಮೂರು ಪಾಳಿಗಳಿಗೆ 6-7 ರೀತಿಯ ವೈದ್ಯರ ಅಗತ್ಯವಿದೆ. ಅವರೆಲ್ಲರಿಗೂ ಅಪಾರ ಸಂಖ್ಯೆಯ ಪಿಪಿಇ ಕಿಟ್‌ಗಳು ಮತ್ತು ಡಿನ್ಪೋಸಬಲ್‌ಗಳು ಬೇಕಾಗುತ್ತವೆ. ಇದಲ್ಲದೆ ಕೋವಿಡ್ ಆಸ್ಪತ್ರೆಗಳಲ್ಲಿ ನೈರ್ಮಲಿಕರಣವು ನಿರಂತರ ಪ್ರಕ್ರಿಯೆಯಾಗಿದೆ. ಆಸ್ಪತ್ರೆಗಳು ಈ ವೆಚ್ಚವನ್ನು ಭರಿಸಬೇಕಾಗುತ್ತದೆ. ಬಯೋಮೆಡಿಕಲ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಬೋಂಡ್ವೆ ಹೇಳಿದ್ದಾರೆ.