Advertisement

ಸರ್ಕಾರಿ ಶಾಲೆ ಉಳಿವಿಗಾಗಿ ಪ್ರತಿಭಟನೆ

08:41 PM Oct 12, 2019 | Team Udayavani |

ಮೈಸೂರು: ಮೈಸೂರಿನ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಲೂ ಹೆಚ್ಚು ಹಳೆಯದಾದ ಮಹಾರಾಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಬಾರದು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರರು ಹಾಗೂ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು.

Advertisement

ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಈ ಶಾಲೆಯಿರುವ ಕಟ್ಟಡದಲ್ಲಿ ವಾಸ್ತವ್ಯವಿದ್ದರು ಎಂಬ ಕಾರಣಕ್ಕೆ ಇಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸಲು ರಾಮಕೃಷ್ಣ ಆಶ್ರಮಕ್ಕೆ ಶಾಲೆಯನ್ನು ಒಪ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಶಾಲೆಗೆ ಆಗಮಿಸಿದ್ದರು.

ಈ ವಿಷಯ ತಿಳಿದ ಶಾಲೆಯ ಮಕ್ಕಳ ಪೋಷಕರು, ಕನ್ನಡಪರ ಹೋರಾಟಗಾರರು ಅಧಿಕಾರಿಗಳನ್ನು ತಡೆದು, ಶಾಲೆಯ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ತೀರ್ಪು ಬರುವ ಮುನ್ನವೇ, ಸರ್ಕಾರದ ಯಾವುದೇ ಆದೇಶವಿಲ್ಲದೆ ಶಾಲೆಯನ್ನು ಮುಚ್ಚಿ ಆಶ್ರಮದವರಿಗೆ ಒಪ್ಪಿಸುವುದು ಸರಿಯಲ್ಲ ಎಂದು ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ 2014ರ ಕಡತಗಳನ್ನು ತೋರಿಸಿ ಶಾಲೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿದರು. ಶಾಲೆಯ ಒಳಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸಮಾಲೋಚನೆ ನಡೆಸಿದರೆ, ಹೊರಗೆ ಸರ್ಕಾರಿ ಶಾಲೆಯನ್ನು ಉಳಿಸುವಂತೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ಇಲ್ಲಿ ಕಲಿಯಲು ಬರುವವರೆಲ್ಲ ಬಡವರ ಮಕ್ಕಳು, ಅವರಿಗೆ ಹೆಚ್ಚಿನ ಶುಲ್ಕ ಭರಿಸಲು ಶಕ್ತಿ ಇಲ್ಲ. ಈ ವರ್ಷ ಇಲ್ಲಿ 48 ಮಕ್ಕಳು ಕಲಿಯುತ್ತಿದ್ದು, ಶಾಲೆ ಮುಚ್ಚಿದರೆ ಅವರ ಭವಿಷ್ಯ ಹಾಳಾಗಲಿದೆ ಎಂದು ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಕನ್ನಡ ಪರ ಹೋರಾಟಗಾರರಾದ ಪ.ಮಲ್ಲೇಶ್‌ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next