Advertisement

‘ಜನರ ಭಾವನೆಗೆ ಘಾಸಿ ಮಾಡುತ್ತಿರುವ ರಾಜ್ಯ ಸರಕಾರ’

11:45 AM Nov 10, 2018 | |

ಮಹಾನಗರ : ರಾಜ್ಯ ಸರಕಾರವು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡುವ ಮೂಲಕ ಹಿಂದೂ, ಮುಸ್ಲಿಂ, ಕ್ರೈಸ್ತರ ಭಾವನೆಗೆ ಘಾಸಿ ಮಾಡುತ್ತಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆರೋಪಿದ್ದಾರೆ. ಟಿಪ್ಪು ಸುಲ್ತಾನ್‌ ಜಯಂತಿಯ ಆಚರಣೆಯನ್ನು ರಾಜ್ಯ ಸರಕಾರ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುವ ರೀತಿಯಲ್ಲಿ ಸಿದ್ದರಾಮಯ್ಯನವರ ಜಯಂತಿಯನ್ನೂ ಆಚರಿಸಲಿ. ಟಿಪ್ಪು ಜಯಂತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2015ರಲ್ಲಿ ಆಚರಿಸುವ ಮೂಲಕ ಟಿಪ್ಪುವಿಗಿಂತ ದೊಡ್ಡ ಮತಾಂಧ ಎಂಬುದನ್ನು ಸಿದ್ದರಾಮಯ್ಯ ತೋರಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬ್ರಿಟಿಷರು ಒಡೆದು ಆಳುವ ನೀತಿಯನ್ನು ರೂಪಿಸಿದರು. ದೇಶದಲ್ಲಿ ಈ ನೀತಿಯನ್ನು ಮೊದಲು ಆಚರಣೆಗೆ ತಂದಿದ್ದು ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್‌ ನೆಹರೂ. ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂದು ಹೇಳುತ್ತಾ ಅಲ್ಪಸಂಖ್ಯಾಕ-ಬಹುಸಂಖ್ಯಾಕ ವರ್ಗಗಳನ್ನು ವರ್ಗೀಕರಣ ಮಾಡಿದ್ದರು. ಮತದ ಆಸೆಗೋಸ್ಕರ ಮತಾಂಧ ಸಮಾ ಜಕ್ಕೆ ಪ್ರೇರಕವಾಗಿ ನಿಂತಿದ್ದರು. ಇದರ ಪರಿಣಾಮ ದೇಶದಲ್ಲಿ ಜಾತಿ ವಾದ ಪ್ರಾರಂಭವಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ರಾಜ್ಯದಲ್ಲಿ ಪ್ರಾರಂಭಿಸಿದರು. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂದುವರಿಸುತ್ತಿದ್ದಾರೆ ಎಂದರು.

ಹಲವಾರು ಸಮಸ್ಯೆ ಆರಂಭ
ದೇಶದಲ್ಲಿ ಟಿಪ್ಪುವಿನ ಹೆಸರಿನಲ್ಲಿ ಹಲವಾರು ಸಮಸ್ಯೆಗಳು ಪ್ರಾರಂಭವಾಗಿದೆ. ಟಿಪ್ಪುವಿನ ಖಡ್ಗವನ್ನು ದೇಶಕ್ಕೆ ತಂದ ಉದ್ಯಮಿ ವಿಜಯ ಮಲ್ಯ ಅವರಿಗೆ ಭಾರತ ಬಿಟ್ಟು ವಿದೇಶದಲ್ಲಿ ಕದ್ದು ಬದುಕುವ ಪರಿಸ್ಥಿತಿ ಬಂದಿದೆ. ಅದೇ ರೀತಿ ಮೊದಲ ಬಾರಿಗೆ ಟಿಪ್ಪು ಜಯಂತಿ ಆಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಇದೀಗ ಕುಮಾರಸ್ವಾಮಿ ಅವರು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಅವರಿಗೂ ಅದೇ ಗತಿ ಬರಬಹುದು ಎಂದರು.

ಮುಸ್ಲಿಂ ಸಮುದಾಯಕ್ಕೆ ರಾಜ್ಯ ಸರಕಾರ ಗೌರವ ಕೊಡಲೇಬೇಕೆಂದಿದ್ದರೆ, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಸೂಫಿ ಸಂತರ ಜೀವನ ಚರಿತ್ರೆ, ಜಯಂತಿಯನ್ನಾಗಿ ಆಚರಿಸಲಿ ಎಂದರು. ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಟಿಪ್ಪು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಹಗಳನ್ನು ಬರೆದರೆ ಕಾನೂನು ಕ್ರಮಕೈಗೊಳ್ಳುತ್ತೇವೆಂದು ಗೃಹ ಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಆದರೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಎರಡು ವರ್ಷಗಳ ಹಿಂದೆ ‘ಮಂಗಳೂರು ದರ್ಶನ’ ಎಂಬ ಗ್ರಂಥ ಹೊರತರಲಾಯಿತು. ಈ ಪುಸ್ತಕದಲ್ಲಿ ಟಿಪ್ಪುವಿನ ಅನಾಚಾರದ ಬಗೆಗಿನ ಸಂಗತಿಗಳಿವೆ. ಈ ಪುಸ್ತಕವನ್ನು ಅಂದಿನ ಸಚಿವರಾಗಿದ್ದ ರಮಾನಾಥ ರೈ, ಯು.ಟಿ. ಖಾದರ್‌ ಅವರು ಬಿಡುಗಡೆಗೊಳಿಸಿದ್ದರು. ಅವರ ಮೇಲೆ ಗೃಹಮಂತ್ರಿಗಳು ಪ್ರಕರಣ ದಾಖಲಿಸಿ, ಬಂಧಿಸುತ್ತಾರೆಯೋ ಎಂದು ಪ್ರಶ್ನಿಸಿದರು.

Advertisement

ಸಾಮಾಜಿಕ ಕಾರ್ಯಕರ್ತ ರಾಬರ್ಟ್‌ ರೊಸಾರಿಯೋ ಮಾತನಾಡಿ, ಕ್ರೈಸ್ತ ಸಮುದಾಯದ ಇತಿಹಾಸದಲ್ಲಿ ಟಿಪ್ಪುವಿಗಿಂತ ದೊಡ್ಡ ಶತ್ರು ಬೇರಿಲ್ಲ. ಟಿಪ್ಪು 27 ಚರ್ಚ್‌ ಗಳ ಮೇಳೆ ದಾಳಿ ನಡೆಸಿದ್ದ, ಅದರಲ್ಲಿ 25  ಚರ್ಚ್‌ಗಳನ್ನು ನೆಲಕ್ಕುರುಳಿಸಿದ್ದ. ಟಿಪ್ಪು ಜಯಂತಿ ಆಚರಣೆಯು ದೇಶವನ್ನು ಒಡೆಯಬೇಕೆನ್ನುವ ಮಾನಸಿಕತೆಯ ಭಾಗವಾಗಿದೆ ಎಂದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಬ್ರಿಜೇಶ್‌ ಚೌಟ, ಅನ್ವರ್‌ ಮಾಣಿಪ್ಪಾಡಿ, ಸುಲೋಚನಾ ಅವರು ಮಾತನಾಡಿದರು. ಮಾಜಿ ಶಾಸಕ ಯೋಗೀಶ್‌ ಭಟ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಸಂಜಯ ಪ್ರಭು, ಭಾಸ್ಕರಚಂದ್ರ ಶೆಟ್ಟಿ, ರಮೇಶ್‌ ಕಂಡೆಟ್ಟು, ರಾಮಚಂದ್ರ ಬೈಕಂಪಾಡಿ, ಆನಂದಿ ಮೊದಲಾದವರು ಉಪಸ್ಥಿತರಿದ್ದರು.

ಕುಮಾರಣ್ಣ ಬ್ರದರ್‌ ಮಾತ್ರ… ಅವರಲ್ಲಿ ಖದರ್‌ ಇಲ್ಲ 
ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್‌ ಮಾತನಾಡಿ, ‘ಕುಮಾರಸ್ವಾಮಿ ಅವರು ಸಮಾಜದ ಅಣ್ಣನಾಗಿ ಯೋಚನೆ ಮಾಡಲಿ. ಓಟಿಗೋಸ್ಕರ ಟಿಪ್ಪುಜಯಂತಿಯನ್ನು ಆಚರಿಸುವ ಮೂಲಕ ಜನವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸುವ ವೇಳೆ ಕುಮಾರಸ್ವಾಮಿ ಅವರು ವಿರೋಧಿಸಿದ್ದರು. ಇದೀಗ ಅಧಿಕಾರಕ್ಕೋಸ್ಕರ ಅಂದಿನ ಹೇಳಿಕೆಯನ್ನು ಮರೆತಿದ್ದಾರೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next