Advertisement

ನಾಲೆಗಳಲ್ಲಿ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

12:29 PM Aug 03, 2017 | |

ನಂಜನಗೂಡು: ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗಿ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹುಲ್ಲಹಳ್ಳಿ ಅಣೆಕಟ್ಟೆಗೆ ಮುತ್ತಿಗೆ ಹಾಕಿ ನೀರು ಹರಿಸಿಕೊಳ್ಳಲು ಮುಂದಾದ ನೂರಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

Advertisement

ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತರು ಬುಧವಾರ ಬೆಳಗ್ಗೆ ತಾಲೂಕಿನ ಹುಲ್ಲಹಳ್ಳಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಕೆಲ ಕಾಲ ಧರಣಿ ನಡೆಸಿ ನಂತರ ಹುಲ್ಲಹಳ್ಳಿಯ ಹೊರವಲಯದಲ್ಲಿರುವ ಅಣೆಕಟ್ಟೆಗೆ ಪಾದಯಾತ್ರೆ ಮೂಲಕ ತೆರಳಿ ತಮ್ಮ ನಾಲೆಗಳಿಗೆ ತಾವೇ ನೀರು ಹರಿಸಿಕೊಳ್ಳಲು ಮುಂದಾದ ರೈತರನ್ನು ತೆಡೆದು ರೈತರನ್ನು ಬಂಧಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ವಿದ್ಯಾಸಾಗರ್‌ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ ಸರಕಾರ ಈ ಕುರಿತು ಗಮನ ಹರಿಸದೆ ನಿರ್ಲಕ್ಷ್ಯ ತೋರುವ ಮೂಲಕ ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ.

ಕಬಿನಿ ಅಣೆಕಟ್ಟೆ 76 ಅಡಿವರೆಗೆ ಭರ್ತಿಯಾಗಿದ್ದರೂ ಉದ್ದೇಶ ಪೂರ್ವಕವಾಗಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುವ ಷಡ್ಯಂತ್ರ ನಡೆಸಲಾಗಿದೆ ನೀರಿನ ಒಳಹರಿವಿನ ಪ್ರಮಾಣಕ್ಕೆ ತಕ್ಕಂತೆ ನೀರು ಹರಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಣೆಕಟ್ಟೆಗೆ ನುಗ್ಗುವ ಪ್ರಯತ್ನ: ಸಂಗಂ ರಸ್ತೆ ಮೂಲಕ ಕಬಿನಿ ಅಣೆಕಟ್ಟೆಗೆ ತೆರಳುವ ಪ್ರಯತ್ನ ನಡೆಸಿದ ರೈತರನ್ನು ರಸ್ತೆಯಲ್ಲೇ ತಡೆದ ಪೊಲೀಸರು ಅಣೆಕಟ್ಟೆ ಸಮೀಪ ಪ್ರವೇಶ ನೀಡಲು ನಿರಾಕರಿಸಿದರು. ಈ ವೇಳೆ ರೈತರು ಮತ್ತು ಪೋಲಿಸರಿಗೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.

Advertisement

ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್‌ ದಯಾನಂದ್‌ ಉದ್ರಿಕ್ತ ರೈತರನ್ನು ಸಂತೈಸುವ ಪ್ರಯತ್ನ ನಡೆಸಿದರಾದರೂ ಸಫ‌ಲವಾಗಲಿಲ್ಲ. ಈ ಸಂದರ್ಭದಲ್ಲಿ ಕಬಿನಿ ನಾಲೆಗಳ ಉಪವಿಭಾಗದ ಎಇಇ ಶ್ರೀನಿವಾಸ್‌ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನೀರು ಬಿಡುಗಡೆ ಕುರಿತು ಮಾತುಕತೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಸರ್ಕಾರದಿಂದ ಸ್ಪಷ್ಟ ಸೂಚನೆ ಸಿಗುವವರೆಗೂ ನದಿಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು.

ಇದರಿಂದಾಗಿ  ರೈತರು ತಮ್ಮ ನಾಲೆಗಳಿಗೆ ತಾವೇ ನೀರು ಹರಿಸಿಕೊಳ್ಳುವುದಾಗಿ ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಭೇದಿಸಿ ಅಣೆಕಟ್ಟೆಯತ್ತ ನುಗ್ಗಲು ಮುಂದಾದ ವೇಳೆ ರೈತರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಅಶ್ವಥ್‌ನಾರಾಯಣರಾಜೇ ಅರಸ್‌, ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್‌.ಆರ್‌.ಬಂಗಾರಸ್ವಾಮಿ, ಶಿರಮಳ್ಳಿ ಸಿದ್ದœಪ್ಪ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬಿಳಿಗೆರೆ ಗುರುಲಿಂಗೇಗೌಡ, ಹೆಜ್ಜಿಗೆ ಪ್ರಕಾಶ್‌, ಸತೀಶ್‌ರಾವ್‌, ಮರಳೂರು ಮಹದೇವ್‌ ,ಶಿರಮಳ್ಳಿ ಪುಟ್ಟಬಸಪ್ಪ ನಂದಕುಮಾರ್‌, ಮಾದಪ್ಪ, ನಂದೀಶ್‌ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next