ರಾಯಚೂರು: ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರನ್ನು ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳಬೇಕು ಹಾಗೂ ವೇತನ, ಇತರೆ ಮೂಲ ಸೌಕರ್ಯ ನೀಡದ ಕಂಪನಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಸ್ಪಾರ್ಕ್ ವಿ ಗುತ್ತಿಗೆ ಕಾರ್ಮಿಕರ ಸಂಘ (ಎಐಯುಟಿಯುಸಿ ಸಂಯೋಜಿತ)ದ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು. ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿಕ್ಕಸುಗೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸ್ಪಾರ್ಕ್ ವಿ ಕೆಮಿಕಲ್ಸ್ ಪ್ರೈ.ಲಿ. ಫ್ಲಾಂಟ್‌ನ 50 ಕಾರ್ಮಿಕರನ್ನು ಜ.5ರಂದು ದಿಢೀರ್ ಕೆಲಸದಿಂದ ವಜಾಗೊಳಿಸಲಾಗಿದೆ. ಈ ಕುರಿತು ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಕಾರ್ಮಿಕರ ವೇತನ ಕಡಿತ, ಪಿಎಫ್, ಇಎಸ್‌ಐ, ರಜೆ ಸೇರಿದಂತೆ ಮತ್ತಿತರೆ ಸೌಲಭ್ಯ ನಿರಾಕರಿಸಿ, ಅವುಗಳ ಸಮಗ್ರ ಪರಿಶೀಲನೆ, ವಿಚಾರಣೆ ನಡೆಸದೇ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವ ಕ್ರಮ
ಖಂಡನೀಯ ಎಂದರು.
ಕಾರ್ಮಿಕ ಹಕ್ಕು ಸ್ಥಾಪನೆಗಾಗಿ ಸಂಘಟನೆ ಮಾಡಿಕೊಳ್ಳಲು ಸಹಿಸದೇ ಪ್ರತಿಯಾಗಿ ಕಾರ್ಮಿಕರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಕಾರ್ಮಿಕರಿಗೆ ಕುಡಿಯುವ ನೀರು, ಶೌಚಗೃಹ, ಗ್ಲೌಸ್, ಶೂ ಮತ್ತಿತರೆ ಸುರಕ್ಷತಾ ಸಾಮಗ್ರಿ ನೀಡಿಲ್ಲ. ಕೂಡಲೇ ವಜಾಗೊಳಿಸಿದ ಕಾರ್ಮಿಕರನ್ನು ಮರು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ವೀರೇಶ ಎನ್. ಎಸ್, ಗೌರವಾಧ್ಯಕ್ಷ ಯಲ್ಲಪ್ಪ ನಾಮಾಲಿ, ಉಪಾಧ್ಯಕ್ಷ ಮಹೇಶ ಚೀಕಲಪರ್ವಿ, ಪ್ರಧಾನ ಕಾರ್ಯದರ್ಶಿ ಸಂತೋಷ, ಉದಯಕುಮಾರ, ಬಡೇಸಾಬ್, ಸುರೇಶ ಸ್ವಾಮಿ, ಬಸವರಾಜ ಇತರರಿದ್ದರು.