Advertisement

ಪಠ್ಯ ರಚನಾ ಸಮಿತಿ ರದ್ದು ಪಡಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

03:47 PM Jun 01, 2022 | Shwetha M |

ವಿಜಯಪುರ: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಬೇಕು ಹಾಗೂ ಹಿಂದಿನ ಪಠ್ಯವನ್ನೇ ಮುಂದುರಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಪಠ್ಯ ಪುಸ್ತಕ ರಚನಾ ಸಮಿತಿ ಸಂವಿಧಾನಕ್ಕೆ ವಿರುದ್ಧವಾದ ಹಾಗೂ ಸಮಾಜದಲ್ಲಿ ಉತ್ತಮ ಮೌಲ್ಯ ಬಿತ್ತುವಂತೆ ರಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ರಾಜ್ಯ ಸರ್ಕಾರ ಪ್ರೊ| ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಸಿದ್ಧಪಡಿಸಿದ್ದ ಶಾಲಾ ಪಠ್ಯ ಪುಸ್ತಕ ಮರು ಪರಿಷ್ಕರಿಸಲು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರಚಿಸಿದೆ. ಸದರಿ ಸಮಿತಿ ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಖಂಡನಾರ್ಹ ಬದಲಾವಣೆ ತಂದಿದೆ. ಮರು ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಹಂಚುವ ಕ್ರಮದಿಂದ ಮಕ್ಕಳಲ್ಲಿ ನಕಾರಾತ್ಮಕ ಮನಸ್ಥಿತಿಗೆ ಕಾರಣವಾಗಲಿದೆ ಎಂದು ದೂರಿದರು.

ಜಿಲ್ಲಾ ಪ್ರಧಾನ ಸಂಚಾಲಕ ಎಸ್‌.ಎಂ. ಮಡಿವಾಳರ ಮಾತನಾಡಿ, ಕನ್ನಡದ ಸಂಸ್ಕೃತಿ ಪರಂಪರೆಗೆ ಪೂರಕವಾಗಿದ್ದ ಪಠ್ಯಗಳನ್ನು ಸಕಾರಣವಿಲ್ಲದೇ ತೆಗೆದು ಹಾಕಿದೆ. ಕನ್ನಡದ ಹೆಮ್ಮೆಯ ಸಾಹಿತಿ ಲೇಖಕರಾದ ಪಿ ಲಂಕೇಶ್‌, ಸಾರಾ ಅಬೂಬಕರ್‌, ಗೋರೂರು ಅವರಂಥ ತಜ್ಞರು ಬರೆದ ಮೌಲಿಕ ಪಠ್ಯಗಳನ್ನು ಕಿತ್ತುಹಾಕಿ ಕನ್ನಡ ಚಿಂತನೆಯನ್ನೇ ಅಪಮಾನಿಸಲಾಗಿದೆ. ಇಷ್ಟಕ್ಕೂ ಸದರಿ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇಲ್ಲ. ಇಂಥವರಿಂದಾಗಿ ಸಂಘ ಪರಿವಾರದ ಸಿದ್ದಾಂತಗಳನ್ನು ಪಠ್ಯಗಳಲ್ಲಿ ಸೇರಿಸಿದೆ. ಇಂಥ ಪಠ್ಯಗಳು ಕುವೆಂಪು ಹೇಳಿದ ವಿಶ್ವಮಾನವತೆ ವಿರುದ್ಧವಾಗಿವೆ ಎಂದು ರೋಹಿತ್‌ ಚಕ್ರತೀರ್ಥ ಕನ್ನಡ ವಿರೋಧಿ ಕಿಡಿಗೇಡಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಶಿಕ್ಷಣ ಸಚಿವರು ಆತನ ಕುರಿತು ಹಲವು ಸುಳ್ಳುಗಳನ್ನು ಹೇಳಿದ್ದಾರೆ. ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದ ರೋಹಿತ್‌, ಇದೀಗ ಕುವೆಂಪು ಅವರ ನಾಡಗೀತೆಯನ್ನು ವಿಕೃತಿಗೊಳಿಸಿ ಕನ್ನಡ ವಿರೋಧಿ ಮನಸ್ಥಿತಿಯನ್ನು ತೋರಿದ್ದಾರೆ. ಕುವೆಂಪು, ತೇಜಶ್ವಿ‌ ಅವರು ಬ್ರಾಹ್ಮಣ ವಿರೋಧಿ ಎಂದು ಎತ್ತಿಕಟ್ಟುವ ಕೆಲಸ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಸರ್ಕಾರಗಳು ಯಾರದೋ ಸಿದ್ಧಾಂತ, ಸಂಘಟನೆ, ಸ್ವಾರ್ಥಕ್ಕೆ ಕನ್ನಡಿಗರ ಭಾವನೆಗಳ ಜೊತೆಗೆ ಆಟ ಆಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸರ್ಕಾರಗಳು ಮೊಂಡುತನಕ್ಕೆ ಬಿದ್ದರೆ ಕನ್ನಡಿಗರು ತಕ್ಕ ರೀತಿಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.

ಸಂಘಟನೆಯ ಪ್ರಮುಖರಾದ ಮಹದೇವ ರಾವಜಿ, ವಿನೋದ ದಳವಾಯಿ, ರವಿ ಕಿತ್ತೂರ, ಬಸವರಾಜ ಬಿ.ಕೆ., ರಮೇಶ ಚೌಧರಿ, ತಾಜುದ್ದೀನ ಕಲೀಫಾ, ದಸರತ್‌ ಬಂಢಾರಿ, ಆಸೀಫ್‌ ಪೀರವಾಲೆ, ರಮೇಶ ಹೊನಮೊರೆ, ಅಮೀನಸಾಬ ಅಗಸಿಮನಿ, ಬಾಬು ಯಳವಾರ, ಸುರೇಶ ರಾಠೊಡ, ಮಾರುತಿ ಬಾರಕಡೆ, ಪೀದಾ ಕಲಾದಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next