ಕಮಲನಗರ: ಪಟ್ಟಣದ ರೈಲ್ವೆ ಗೇಟ್ ಬಳಿಯ 3ನೇ ವಾರ್ಡ್‌ನಲ್ಲಿ ಸುಮಾರು 5 ತಿಂಗಳುಗಳಿಂದ ಕುಡಿಯುವನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಮವಾರ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಐದು ತಿಂಗಳುಗಳಿಂದ ಬಡಾವಣೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಆದರೆ, ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ದಿನ ನಿತ್ಯದ ಜೀವನ ಕಷ್ಟಕರವಾಗಿದೆ. ಗ್ರಾಪಂ ಅವ್ಯವಸ್ಥೆಯಿಂದ ನೀರು ಸರಬರಾಜು ಮಾಡದಿರುವುದರಿಂದ ಸಂಕಷ್ಟ ಹೆಚ್ಚಿದೆ ಎಂದು ಮಹಿಳೆಯರು ಆರೋಪಿಸಿದರು.
ಬಡಾವಣೆಯಲ್ಲಿ ಕೊಳವೆ ಬಾವಿ ಇದೆ. ಕಳೆದ ವರ್ಷ ಮಳೆ ಅಭಾವದಿಂದ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿತ್ತು. ಮೋಟಾರ್ ಸಹ ಕೆಟ್ಟು ಹೋಗಿತ್ತು. ಇದರಿಂದ ನೀರಿನ ಸಮಸ್ಯೆ ಗಂಭಿರವಾಗಿದ್ದ ಕಾರಣ ಪಂಚಾಯತದಿಂದ ಮೂರು-ನಾಲ್ಕು ದಿನಗಳಿಗೊಮ್ಮೆ ನೀರಿನ ಟ್ಯಾಂಕರ್ ಕಳುಹಿಸಿತ್ತಿದ್ದರು. ಆ ನೀರು ಬಡಾವಣೆಯ ಜನರಿಗೆ ಸಾಕಾಗುತ್ತಿದ್ದಿಲ್ಲ. ಈಗ ಅದೂ ಇಲ್ಲದೇ ಬೇರೆ ಬೇರೆ ವಾರ್ಡ್‌ಗಳಿಗೆ ತೆರಳಿ ಇತರ ಕೊಳವೆಬಾವಿಗಳಿಂದ ನೀರು ತರುವಂತಾಗಿದೆ. ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ಕೊಳವೆಬಾವಿಯಲ್ಲಿ ನೀರಿದ್ದರೂ ಮೋಟಾರ್ ದುರುಸ್ತಿ ಮಾಡದಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯ ಮಹಿಳೆಯರಾದ ನಾಗಮ್ಮಾ ವಡ್ಡರ, ನರಸಮ್ಮಾ ವಡ್ಡರ, ಮಹೇರೂನಬಿ ಖುರೇಶಿ, ಫರಜನಾ ಶೇಖ, ಅರ್ಷಲಿ ಬಿರಾದಾರ, ಮೀನಾ ಬಿರಾದಾರ, ಅರ್ಷದ ಶೇಖ, ಮೋಯಿನ ಮನಿಯಾರ, ಸಲ್ಮಾನ ಖುರೇಶಿ, ಫೇರೋಜ ಬಾಗವಾನ, ಅಶೋಕ ಹಡಪದ, ಅಮಜತ ಶೇಖ, ಆದಮ, ಅಲಿಮೋದ್ದಿನ ಬಾಗವಾನ, ಅಖೀಲ ಬಾಗವಾನ, ಶಿವಪ್ಪಾ ಬಿರಾದಾರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.