ದೇವನಹಳ್ಳಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹ ಭಾಗಿತ್ವ (ಆರ್.ಸಿ.ಇ.ಪಿ) ಮುಕ್ತ ವ್ಯಾಪಾರ ಒಪ್ಪಂದ ಮೂಲಕ ವಿದೇಶಿ ಹಾಲು ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಧೋರಣೆ ಖಂಡಿಸಿ ಬೆಂ.ಗ್ರಾಮಾಂತರ ಜಿಲ್ಲಾ ರೈತ ಸಂಘದಿಂದ ಜಿಲ್ಲಾ ಸಂಕೀರ್ಣ ಮುಂಭಾಗದಲ್ಲಿ ರೈತರು ಹಸುಗಳ ಜೊತೆಗೆ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರವು ಆಸಿಯಾನ್ ರಾಷ್ಟ್ರಗಳೊಂದಿಗೆ ಸೇರಿ ಪ್ರಾದೇಶಿಕ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನ.4 ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದರೆ ನಮ್ಮ ಆಹಾರ, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರ ನಷ್ಟಕ್ಕೆ ಗುರಿಯಾಗುತ್ತದೆ. ಈ ಒಪ್ಪಂದದಿಂದ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ಬರುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಹರೀಶ್ ಮಾತನಾಡಿ, ಈ ಒಪ್ಪಂದದಿಂದ ವಿದೇಶಿ ಹೂಡಿಕೆದಾರರು ಕೃಷಿ ಭೂಮಿ ಖರೀದಿಸಲು ಅನುಕೂಲವಾಗುತ್ತದೆ. ದೊಡ್ಡ ಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆ ನಾಶವಾಗುತ್ತದೆ. ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ದೇಶದ ಕೃಷಿ ಕ್ಷೇತ್ರ ನಾಶವಾಗುತ್ತದೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಒಳ್ಳೆಯ ದಿನಗಳ ಬದಲಿಗೆ ಕೆಟ್ಟ ದಿನಗಳು ಬರುತ್ತಿವೆ. ಈಗಾಗಲೇ ನಿರುದ್ಯೋಗ ಸಮಸ್ಯೆ ತಾಂಡವವಾಗುತ್ತಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಆರ್‌ಸಿಇಪಿ ಒಪ್ಪಂದದಿಂದ ಹಿಂದೆ ಸರಿದು ರೈತರನ್ನು ಉಳಿಸಬೇಕು. ದೇಶದಲ್ಲಿ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಒಪ್ಪಿ ಭಾರತ ಸಹಿ ಹಾಕಿದ ನಂತರ ಜಾರಿಗೆ ಬಂದಿರುವ ಮುಕ್ತ ಆರ್ಥಿಕ ನೀತಿ, ಮಾರುಕಟ್ಟೆಯ ನೀತಿಯಿಂದಾಗಿ ದೇಶದ ಕೃಷಿ ಕ್ಷೇತ್ರದ ಮೇಲೆ ಸಾಕಷ್ಟು ದುಷ್ಟಪರಿಣಾಮ ಬೀರಿದೆ. ಮತ್ತೆ ರೈತರನ್ನು ಬೀದಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ, ದೇವನಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿದಲೂರು ರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಬಚ್ಚೇಗೌಡ, ದೊಡ್ಡಬಳ್ಳಾಪುರ ರೈತ ಸಂಘದ ಅಧ್ಯಕ್ಷ ಹನುಮೇಗೌಡ, ಹೊಸಕೋಟೆ ತಾಲೂಕು ರೈತ ಸಂಘದ ಅಧ್ಯಕ್ಷ ಬಚ್ಚೇಗೌಡ, ಮಹಿಳಾ ಸಂಘಟನಾ ಸಂಚಾಲಕಿ ಸುಶೀಲಮ್ಮ ಭಾಗವಹಿಸಿದ್ದರು.