Advertisement

ವಿವಿಧ ಇಲಾಖೆಗಳ ದಿನಗೂಲಿ ನೌಕರರಿಂದ ಪ್ರತಿಭಟನೆ

12:20 PM Jul 18, 2017 | Team Udayavani |

ಕಲಬುರಗಿ: ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರು
ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ಇದಕ್ಕೂ ಮುನ್ನ ಸರದಾರ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಅಲ್ಲಿ ವೇದಿಕೆ ಅಧ್ಯಕ್ಷ ಚಂದ್ರಶೇಖರ ಎಸ್‌.ಹಿರೇಮಠ ಮಾತನಾಡಿ, ಸತತ ಏಳು ವರ್ಷಗಳಿಂದ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲಾಗುತ್ತಿದೆ. ಅದರ ಪರಿಣಾಮ ದಿನಗೂಲಿ ನೌಕರರು ಸರಕಾರದಿಂದ ವಿಶೇಷ ನಿಯಮಾವಳಿ ವಿಶೇಷ ಕಾನೂನಿನ
ಅಡಿಯಲ್ಲಿ ಕಾಯಂಗೊಂಡಿದ್ದಾರೆ. 2013ರ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ 2013 ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಸರಕಾರ ನಿಡದೆ ಈ ನೌಕರರಿಗೆ ಘೋರ ಅನ್ಯಾಯ ಮಾಡಿದೆ ಎಂದು ಆಪಾದಿಸಿದರು.

ನೌಕರರಿಗೆ ಶೇ. 100ರಷ್ಟು ತುಟ್ಟಿಭತ್ಯೆ, ಮನೆ ಬಾಡಿಗೆ ನೀಡುವ ಕಾನೂನು ಇದ್ದರೂ, ಕೇವಲ ಶೇ. 75ರಷ್ಟು ನೀಡಿ ಕಳೆದ ಮೂರು ವರ್ಷಗಳಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತಿ ನಂತರ ಪಿಂಚಣಿ, ಗ್ರಾಚ್ಯುಟಿ ನೀಡುವಂತೆ ವಿಧೇಯಕದಲ್ಲಿದ್ದರೂ ಆರ್ಥಿಕ ಬಿಕ್ಕಟ್ಟಿನ ಕುಂಟು ನೆಪ ಹೇಳಿ ಈ ನೌಕರರನ್ನು ವಂಚಿಸಲಾಗುತ್ತಿದೆ ಎಂದು
ದೂರಿದರು. ಕಳೆದ ಮೂರು ವರ್ಷಗಳಿಂದ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುತ್ತಿದ್ದರೂ ಪ್ರಯೋಜನವಾಗಿಲ್ಲ. ಮುಂದಿನ 15 ದಿನಗಳಲ್ಲಿ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದರೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಂಚಾಯತ್‌ ರಾಜ್‌, ಲೋಕೋಪಯೋಗಿ, ಅರಣ್ಯ, ಗ್ರಾಮೀಣ ನೀರು ಸರಬುರಾಜು, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಹಲವು ಇಲಾಖೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next