ಮೈಸೂರು: ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದ ಪೌರ ಕಾರ್ಮಿಕರು ಕೆಲಸ ಬಹಿಷ್ಕರಿಸಿ ನಗರಪಾಲಿಕೆ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಆಗ್ರಹಿಸಿದ ಪೌರ ಕಾರ್ಮಿಕರು, ಸೋಮವಾರದಿಂದ ಕೆಲಸ ಸ್ಥಗಿತಗೊಳಿಸಿ ರಾಜವ್ಯಾಪಿ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಪ್ರತಿಭಟಿಸುತ್ತಿರುವುದಾಗಿ ತಿಳಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳೇ ಕಳೆದರೂ ಇದುವರೆವಿಗೂ ನಮ್ಮನ್ನು ಕಾಯಂಗೊಳಿಸಿಲ್ಲ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಗುತ್ತಿಗೆ ಪದ್ಧತಿ ತಡೆಯಲು 2016ರ ಮೇ 4ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ 2017ರ ಮಾರ್ಚ್ ತಿಂಗಳೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ತೀರ್ಮಾನಿಸಿತ್ತು, ಆದರೆ ಜೂನ್ ತಿಂಗಳಾದರೂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
45 ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರವಾಗಲೀ, ಗುತ್ತಿಗೆದಾರ ಸಂಸ್ಥೆಯಾಗಲೀ ಪೌರಕಾರ್ಮಿಕರಿಗೆ ಕೆಲಸದ ಭದ್ರತೆ, ಆರೋಗ್ಯದ ಸುರಕ್ಷತೆ ಒದಗಿಸದೆ ಹೀನಾಯವಾಗಿ ದುಡಿಸಿಕೊಳ್ಳುತ್ತಿವೆ. ಸುರಕ್ಷತೆ ಇಲ್ಲದ ಕಾರಣ ಪೌರಕಾರ್ಮಿಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದ ಕೂಡಲೇ ರಾಜ್ಯದಲ್ಲಿರುವ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರಿಗೆ ಸೂಕ್ತ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಎನ್. ನರಸಿಂಹ, ವಿಜಯ, ಜಯರಾಮು, ಪಳನಿಸ್ವಾಮಿ ಸೇರಿದಂತೆ ನೂರಾರು ಮಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿದ್ದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಂತೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ವಾಟರ್‌ಮ್ಯಾನ್‌ಗಳನ್ನು ಕಾಯಂಗೊಳಿಸುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಪೌರಕಾರ್ಮಿಕರು ಹಾಗೂ ವಾಟರ್ ಮ್ಯಾನ್‌ಗಳು ಸ್ವತ್ಛತೆ, ಕುಡಿಯುವ ನೀರು ಪೂರೈಕೆ ಬಹಿಷ್ಕರಿಸಿ ಆಯಾ ನಗರಸಭೆ, ಪುರಸಭೆ, ಪಪಂ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
-ಮಾರ, ಮೈಸೂರು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ