ಬಾದಾಮಿ: ಪುರಸಭೆಗೆ ಮಂಜೂರಾದ ಮುಖ್ಯಮಂತ್ರಿ ಎಸ್‌ಎಫ್‌ಸಿ ವಿಶೇಷ ಯೋಜನೆ 2 ಕೋಟಿ ಅನುದಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಾದಾಮಿ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹಾಗೂ ಮುಖ್ಯಾಧಿಕಾರಿ ಧೋರಣೆ ಖಂಡಿಸಿ ಅವರ ವಿರುದ್ಧ ಘೋಷಣೆ ಕೂಗಿದರು. ಪುರಸಭೆ ಸಿಬ್ಬಂದಿ ಒಳಪ್ರವೇಶ ಮಾಡಲು ಯತ್ನಿಸಿದಾಗ ಪ್ರತಿಭಟನಾಕಾರರು ಅವರನ್ನು ತಡೆದರು. ಸ್ಥಳೀಯ ಠಾಣಾಧಿಕಾರಿ ಪ್ರಕಾಶ ಬಣಕಾರ ಬಿಜೆಪಿ ಮುಖಂಡರು ಹಾಗೂ ಯೋಜನಾ ನಿರ್ದೇಶಕರ ಸಮ್ಮುಖದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿದರು.
ತಾವು ಶಾಸಕರಿದ್ದಾಗ ತಾರತಮ್ಯ ಮಾಡಿಲ್ಲ. ನನ್ನ ಅವಧಿಯಲ್ಲಿ ಅನುದಾನ ತಾರತಮ್ಯವಾಗಿರಲಿಲ್ಲ. ಸಾರ್ವಜನಿಕವಾಗಿ ಸರಕಾರದ ಅನುದಾನ ಸದ್ಬಳಕೆ ಮಾಡುವ ಪ್ರಯತ್ನ ನಡೆಯಬೇಕು. ಜಿಲ್ಲಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತಂದು ಸರಿಪಡಿಸುವ ಯತ್ನ ಮಾಡಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟ, ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಮದಾಪುರ, ತಾಲೂಕಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಕ್ರಿಯಾ ಯೋಜನೆ ರದ್ದುಗೊಳಿಸಬೇಕು. ವಿಶೇಷ ಅನುದಾನವನ್ನು ಸಮರ್ಪಕವಾಗಿ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಮುಖಡರಾದ ಗಿರೀಶ ಶೆಟ್ಟರ, ಎಫ್.ಆರ್.ಪಾಟೀಲ (ಖ್ಯಾಡ), ಗುರಪ್ಪ ಜಂಬಗಿ, ಹುಚ್ಚಪ್ಪ ಬೆಳ್ಳಿಗುಂಡಿ, ಬಿ.ವೈ.ಚಿಕ್ಕನ್ನವರ, ಅಡಿವೆಪ್ಪ ಡಾಣಕಶಿರೂರ, ಕುಮಾರ ಪಟ್ಟಣಶೆಟ್ಟಿ, ಶಿವನಗೌಡ ಸುಂಕದ, ಶಹಜಾನ ಬೀಳಗಿ, ಶೇಖರಯ್ಯ ಹಿರೇಮಠ, ಪುರಸಭೆ ಸದಸ್ಯರಾದ ಅಶೋಕ ಯಲಿಗಾರ, ಬಸವರಾಜ ತೀರ್ಥಪ್ಪನವರ, ರೆಹಮಾನ ಕೆರಕಲಮಟ್ಟಿ, ರವಿ ಬಂಡಿವಡ್ಡರ, ಡಿ.ಎಲ್. ನಾಯ್ಕರ್, ಬಸು ಗೊರಕೊಪ್ಪನವರ, ಹರೀಶ ಕೆರಿಹೊಲದ ಪಾಲ್ಗೊಂಡಿದ್ದರು.