ಹುಬ್ಬಳ್ಳಿ: ಕೇಂದ್ರ ಸರಕಾರ ಅಡುಗೆ ಅನಿಲ ದರ ಏರಿಕೆ ಸೇರಿದಂತೆ ವಿವಿಧ ಜನವಿರೋಧಿ ನೀತಿಗಳನ್ನು ವಿರೋಧಿಸಿ ಎಐಸಿಸಿ ಸದಸ್ಯ ಶಾಕೀರ ಸನದಿ ನೇತೃತ್ವದಲ್ಲಿ ಸೆಗಣಿಯ ಬೆರಣಿ (ಕುಳ್ಳು) ಉರಿಸಿ ಚಹಾ ತಯಾರಿಸಿ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ ವಿತರಿಸಿ ಪ್ರತಿಭಟನೆ ಮಾಡಲಾಯಿತು.
ರಾಯಣ್ಣ ವೃತ್ತದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನಾಕಾರರು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ವೈಫಲ್ಯಗಳು ಹಾಗೂ ದರ ಏರಿಕೆ ಬಗೆಗಿನ ಜನರ ಆಕ್ರೋಶವನ್ನು ಬೇರೆಡೆಗೆ ಸೆಳೆಯಲು ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೆ ಮುಂದಾಗಿದೆ. ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಹಣ ಲೂಟಿ ಮಾಡುತ್ತಿದೆ. ಜೊತೆಗೆ ಉಳ್ಳಾಗಡ್ಡಿ ಇನ್ನಿತರ ಆಹಾರಧಾನ್ಯಗಳ ಬೆಲೆ ಏರಿಕೆಯಾಗಿದೆ ಎಂದು ದೂರಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಕೇಂದ್ರ ಸರಕಾರ 3.5 ಕೋಟಿ ಬಡವರಿಗೆ ಅಡುಗೆ ಅನಿಲ ನೀಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಅಡುಗೆ ಅನಿಲ ಸಿಲಿಂಡರ್ ಬೆಲೆ 350ರಿಂದ 735 ರೂ.ಗೆ ಹೆಚ್ಚಿಸಲಾಗಿದೆ. ಬಿಜೆಪಿ ಅಚ್ಛೇ ದಿನ್ ಆಯೇಗಾ ಎಂದು ಸುಳ್ಳು ಹೇಳುತ್ತಲೇ ದಿನಬಳಕೆ ವಸ್ತುಗಳ ಬೆಲೆ ಏರಿಸುತ್ತಿದೆ. ಇದರಿಂದ ಸಣ್ಣ ವ್ಯಾಪಾರಿಗಳು, ಬಡವರಿಗೆ ತುಂಬಾ ತೊಂದರೆ ಆಗುತ್ತಿದೆ. ಕೇಂದ್ರ ಸರಕಾರ ಕೂಡಲೇ ಅಡುಗೆ ಅನಿಲ ದರ ಕಡಿತಗೊಳಿಸಬೇಕೆಂದು ಆಗ್ರಹಿಸಿದರು. ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಕೇಂದ್ರ ಸರಕಾರ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತಲೇ ಅಡುಗೆ ಅನಿಲ ದರ ಏರಿಸುವ ಮೂಲಕ ಮತ್ತೆ ಬಡ ಮಹಿಳೆಯರು ಹಳೆಯ ಪದ್ಧತಿಯಂತೆ ಕಟ್ಟಿಗೆ, ಸೆಗಣಿ ಬೆರಣಿಯಿಂದ ಅಡುಗೆ ಮಾಡುವಂತಹ ಪರಿಸ್ಥಿತಿ ತಂದಿದ್ದಾರೆ. ಕೇಂದ್ರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷವು ಪ್ರತಿ ವಾರ್ಡ್, ಓಣಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ಅನ್ವರ ಮುಧೋಳ, ಶಫಿ ಮುದ್ದೇಬಿಹಾಳ, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಸಿದ್ದು ತೇಜಿ, ಇಲಿಯಾಸ್ ಮನಿಯಾರ, ಅಷ್ಪಾಕ ಗುಳೇದಗುಡ್ಡ, ನಜೀರ ಹೊನ್ನಿಹಾಳ, ದಾದಾಪೀರ ಕಾಲ್ಗೆ, ಅನ್ವರ ಧಾರವಾಡ, ಮೈನು ನಾಲಬಂದ, ಶರೀಫ ನದಾಫ ಇನ್ನಿತರರಿದ್ದರು.