ಕಲಬುರಗಿ: ಕಳೆದ ಹಲವು ದಿನಗಳಿಂದ ನಗರಕ್ಕೆ ಪೂರೈಕೆ ಆಗುತ್ತಿರುವ ಕುಡಿಯುವ ನೀರು ಸಂಪೂರ್ಣ ಹಸಿರು ಬಣ್ಣದಿಂದ ಕೂಡಿದ್ದಲ್ಲದೇ, ಭಾರಿ ಪ್ರಮಾಣದಲ್ಲಿ ಕಲುಷಿತವಾಗಿದೆ. ಇದನ್ನು ಕುಡಿದರೆ ಜನರಿಗೆ ಖಂಡಿತವಾಗಿ ರೋಗ ಹರಡುತ್ತದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಉತ್ತಮ ನೀರು ಪೂರೈಕೆ ಮಾಡಬೇಕು ಎಂದು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಆಗ್ರಹಿಸಿದರು.
ನಗರದ ಮಹಾನಗರ ಪಾಲಿಕೆ ಎದುರು ಶುಕ್ರವಾರ ಯುವ ಕಾಂಗ್ರೆಸ್ ಮತ್ತು ಸಾರ್ವಜನಿಕ ಜತೆಗೂಡಿ ಪ್ರತಿಭಟನೆ ಮಾಡಿದ ಅವರು, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ನಗರದ ನಾಗರಿಕರು ಬಲಿಯಾಗದಿರಲಿ. ಕೂಡಲೇ ನಗರಕ್ಕೆ ಶುದ್ಧ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಆಯುಕ್ತ ಭುವನೇಶ ಪಾಟೀಲ, ಜಲ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಈರಣ್ಣ ಝಳಕಿ, ಸಂತೋಷ ಪಾಟೀಲ ದಣ್ಣೂರ, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಠೊಡ, ಮಜರ್ ಅಲಂಖಾನ್, ಬಾಬುರಾವ ಜಹಾಗೀರದಾರ, ಶಿವಕುಮಾರ ಹೊನಗುಂಟಿ, ಜಗನ್ನಾಥ ಗೋಧಿ ಮತ್ತಿತರರು ಇದ್ದರು.
12ಲಕ್ಷ ಜನಸಂಖ್ಯೆ ಹೊಂದಿರುವ ನಗರಕ್ಕೆ ಇಂತಹ ಕಲುಷಿತ ನೀರು ಕೊಡಲು ಅಧಿಕಾರಿಗಳು ಹೇಗೆ ಮನಸ್ಸು ಮಾಡಿದರು. ನಿಜಕ್ಕೂ ನಾಚಿಕೆಯಾಗಬೇಕು. ಬಿಜೆಪಿ ಸರಕಾರದಿಂದ ಜನರ ಆರೋಗ್ಯದ ರಕ್ಷಣೆ ಸಾಧ್ಯವಿಲ್ಲ. ಇದೆಲ್ಲವನ್ನು ಕೇಳಬೇಕೆಂದರೆ ಮೇಯರು ಇಲ್ಲ, ಸದಸ್ಯರೂ ಇಲ್ಲದಂತಾಗಿದೆ. ಕೂಡಲೇ ಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
-ಖನೀಜ್ ಫಾತಿಮಾ, ಉತ್ತರ ಕ್ಷೇತ್ರದ ಶಾಸಕಿ