Advertisement

ಗೌರಿ ಲಂಕೇಶ್‌ ಹತ್ಯೆ ವಿರುದ್ಧ ಭುಗಿಲೆದ್ದ ಆಕ್ರೋಶ

06:25 AM Sep 07, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ದೇಶದೆಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹತ್ಯೆ ಖಂಡಿಸಿ, ದೆಹಲಿ, ಚೆನ್ನೈ, ಮೈಸೂರು, ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಬಾಗಲಕೋಟೆ ಸೇರಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.

Advertisement

ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆ, ದಲಿತ ಸಂಘಟನೆ, ರೈತ ಸಂಘಟನೆ, ಪತ್ರಕರ್ತರ ಸಂಘಟನೆಗಳು, ಬಹುತ್ವಕ್ಕಾಗಿ ಯುವಜನತೆ, ಕನ್ನಡಪರ ಸಂಘಟನೆ ಹಾಗೂ ಆಮ… ಆದ್ಮಿಪಕ್ಷ ಸೇರಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು. 

ಪ್ರಗತಿಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಕಾಲೇಜು ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆಯಿಂದಲೇ ನಗರದ ಪುರಭವನದಲ್ಲಿ ಸೇರಿ, “ಐ ಆ್ಯಮ್‌ ಎ ಗೌರಿ’, “ಐ ಆ್ಯಮ್‌ ವಿಥ್‌ ಗೌರಿ’, “ಗೌರಿ ಜಿಂದಾಬಾದ್‌’, “ಬಂಧಿಸಿ..ಬಂಧಿಸಿ… ಹಂತಕರನ್ನು ಬಂಧಿಸಿ’, “ಹತ್ಯೆಯಿಂದ ವಿಚಾರ ಸಾಯೋದಿಲ್ಲ’…ಹೀಗೆ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿ, ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಕಣ್ಗಾವಲಿನಲ್ಲಿ ಮಾಡಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ಮಾಜಿ ಅಡ್ವೋಟೇಕ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌, ಸಾಹಿತಿ ಪ್ರೊ.ಮರುಳಸಿದ್ದಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್‌, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ಹಲವರು ಮಾತನಾಡಿ, ಸಾಹಿತಿ, ವಿಚಾರವಾದಿಗಳು, ಪ್ರಗತಿಪರ ಚಿಂತಕರ ಹತ್ಯೆಯಿಂದ ಅವರು ಪ್ರತಿಪಾದಿಸಿದ ವಿಚಾರ ಅಥವಾ ಆಲೋಚನೆ ಸಾಯುವುದಿಲ್ಲ.

ಗೌರಿಯವರನ್ನು ಹತ್ಯೆ ಮಾಡಿದ್ದರಿಂದ ಅವರು ನೀಡಿದ ವಿಚಾರಧಾರೆ ಕೊನೆಯಾಗುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Advertisement

ರಾಜ್ಯದ ಇತರೆಡೆಯೂ ಪ್ರತಿಭಟನೆ: ಗದಗಿನಲ್ಲಿ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಮಂಡ್ಯ, ಮೈಸೂರು, ಬೆಳಗಾವಿಗಳಲ್ಲಿ ಪ್ರಗತಿಪರ ಮಹಿಳಾ ಬರಹಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಲಬುರಗಿಯಲ್ಲಿ ಪ್ರಗತಿಪರ ಚಿಂತಕರು ಜಿಲ್ಲಾಧಿಕಾರಿ ಕಚೇರಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬೀದರ್‌ನಲ್ಲಿ ಅಂಬೇಡ್ಕರ್‌ ವೃತ್ತದ ಎದುರು ಪ್ರತಿಭಟನಾ ರ್ಯಾಲಿ ನಡೆಯಿತು.

ಪತ್ರಕರ್ತರ ಮೌನ ಪ್ರತಿಭಟನೆ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಎದುರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು. ನಂತರ ಘಟನೆ ಖಂಡಿಸಿ ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟದಿಂದ ಖಂಡನಾ ಸಭೆ ನಡೆಸಿ, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಶೀಘ್ರ ಗತಿಯಲ್ಲಿ ಕೈಗೊಂಡು ಹಂತಕರ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಲಾಯಿತು. ಮಾಧ್ಯಮ ಅಕಾಡೆಮಿ ಆಧ್ಯಕ್ಷ ಸಿದ್ದರಾಜು, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಬಿ.ವಿ.ಮಲ್ಲಿಕಾರ್ಜುನಯ್ಯ, ವಾಸುಕಿ, ಜ್ಯೋತಿ ಇರ್ವತ್ತೂರು, ಮಂಜುನಾಥ ಅದ್ದೆ, ವೈ.ಗ.ಜಗದೀಶ್‌, ನಟಿ ವಸುಂಧರ ದಾಸ್‌, ಪ್ರೊ. ಅಶೋಕ್‌ಕುಮಾರ್‌, ಶಮಂತ, ಭಾನುತೇಜ್‌, ಬಸವ ರಾಜ ಹಿಟ್ನಾ ಲ್‌, ಆರ್‌.ಟಿ. ವಿಠಲ್‌ ಮೂರ್ತಿ, ಶಿವಾನಂದ ತಗ ಡೂರು,ರಾಜು,ಪ್ರಸ್‌ ಕ್ಲಬ್‌ ಅಧ್ಯಕ್ಷ ಸದಾ ಶಿವ ಶೆಣೈ ಮಾತನಾಡಿ ಘಟನೆ ಖಂಡಿಸಿ ಪತ್ರಕರ್ತರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು. ನಂತರ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಅರ್ಪಿಸಲಾಯಿತು.ಇದೇ ವೇಳೆ, ಮೈಸೂರು, ರಾಯಚೂರು,  ಕಲಬುರಗಿ, ಹುಬ್ಬಳ್ಳಿ, ಕೊಪ್ಪಳ ಸೇರಿದಂತೆ ರಾಜ್ಯದ ಇತರೆಡೆಯೂ ಪತ್ರಕರ್ತರು ಪ್ರತಿಭಟನೆ ನಡೆಸಿ, ಹತ್ಯೆ ಖಂಡಿಸಿದರು.

ದೇಶದ ಇತರೆಡೆಯೂ ಪ್ರತಿಭಟನೆ: ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ದೆಹಲಿ, ಚೆನ್ನೈ, ಹೈದರಾಬಾದ್‌,ಭುವನೇಶ್ವರದಲ್ಲೂ ಪ್ರತಿಭಟನೆ ನಡೆಸಲಾಯಿತು.ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕನಯ್ಯ ಕುಮಾರ್‌, ಸಿಪಿಐ-ಸಿಪಿಎಂ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next