Advertisement

ಜೂ.1ರಿಂದ ಕೃಷಿ ಉತ್ಪನ್ನ ಪೂರೈಕೆ ತಡೆದು ಪ್ರತಿಭಟನೆ

11:49 AM May 19, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ಕೃಷಿ ಉತ್ಪನ್ನಗಳ ಪೂರೈಕೆ ತಡೆಯುವ ಮೂಲಕ ರಾಷ್ಟ್ರೀಯ ಕಿಸಾನ್‌ ಮಹಾಸಂಘ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಬೆಂಬಲ ಸೂಚಿಸಿದೆ.

Advertisement

ಜೂನ್‌ 1ರಿಂದ 10ರವರೆಗೆ ದೇಶದ ಪ್ರಮುಖ ನಗರಗಳಲ್ಲಿ ವಿವಿಧ ದಿನಗಳಂದು ಈ ಪ್ರತಿಭಟನೆ ನಡೆಯಲಿದ್ದು, ಕೊನೆಯ ದಿನ ಅಂದರೆ ಜೂ.10ರಂದು ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಕಬ್ಬು ಬೆಳೆಗಾರರ ಸಂಘ ಬೆಂಬಲ ಘೋಷಿಸಿದ್ದು, ಅದರಂತೆ ಅಂದು ಗ್ರಾಮೀಣ ಪ್ರದೇಶಗಳಿಂದ ಪ್ರಮುಖ ನಗರಗಳಿಗೆ ಬರುವ ತರಕಾರಿ, ಹಾಲು ಮತ್ತಿತರ ಕೃಷಿ ಉತ್ಪನ್ನಗಳ ಪೂರೈಕೆಯನ್ನು ತಡೆಯುವ ಮೂಲಕ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರಬೂರು ಶಾಂತಕುಮಾರ್‌, ರೈತರ ವಿವಿಧ ಪ್ರಕಾರದ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ರಾಷ್ಟ್ರೀಯ ಕಿಸಾನ್‌ ಮಹಾಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಾವು ಬೆಂಬಲ ಸೂಚಿಸಿರುವುದಾಗಿ ಹೇಳಿದರು.

ಇನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಯಾವುದೇ ಸರ್ಕಾರ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿದ್ದ 1,200 ಕೋಟಿ ರೂ. ಕೊಡಿಸಬೇಕು. ಮಹದಾಯಿ ಮತ್ತು ಕಾವೇರಿ ವಿವಾದ ಬಗೆಹರಿಸಬೇಕು, ಮೇಕೆದಾಟು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಹಗಲಿನಲ್ಲಿ 10 ಗಂಟೆ ವಿದ್ಯುತ್‌ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಮೊಕದ್ದಮೆ ವಾಪಸ್‌ ಪಡೆಯಲು ಆಗ್ರಹ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ರೈತರ ಪರವಾಗಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಅದೇ ರೀತಿ, ವಿವಿಧ ಹೋರಾಟಗಳಲ್ಲಿ ಭಾಗಿಯಾದ ರೈತರ ವಿರುದ್ಧ ದಾಖಲಿಸಲಾದ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ಹಿತ ಕಾಯಬೇಕು ಎಂದು ಕುರಬೂರು ಶಾಂತಕುಮಾರ್‌ ಆಗ್ರಹಿಸಿದರು. ಸಭೆಯಲ್ಲಿ ರಾಷ್ಟ್ರೀಯ ಕಿಸಾನ್‌ ಮಹಾಸಂಘದ ಸಂಯೋಜಕ ಕೆ.ವಿ.ಬಿಜು ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next