Advertisement
ಸಿಎಎ ವಿರೋಧಿಸಿ ದಿಲ್ಲಿಯ ಶಹೀನ್‌ಬಾಗ್‌ನಲ್ಲಿ ಸುದೀರ್ಘಾವಧಿ ವರೆಗೆ ರಸ್ತೆ ತಡೆ ಮಾಡಿದ್ದ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನಿರ್ದಿಷ್ಟ ಅಥವಾ ಪ್ರತಿಭಟನೆಗಳಿಗೆಂದೇ ನಿಗದಿ ಮಾಡಿರುವ ಸ್ಥಳಗಳಲ್ಲಿ ಪ್ರತಿಭಟನೆ ಮಾಡಬೇಕೇ ಹೊರತು, ಜನರಿಗೆ ಸಮಸ್ಯೆ ತಂದೊಡ್ಡುವ ರೀತಿಯಲ್ಲಿ ವರ್ತಿಸಬಾರದು ಎಂದಿತ್ತು. ಅಷ್ಟೇ ಅಲ್ಲ, ಪ್ರತಿಭಟನನಿರತರು, ಅಧಿಕಾರಶಾಹಿಯ ಪಾತ್ರದ ಬಗ್ಗೆಯೂ ಸುಪ್ರೀಂ ಕೋರ್ಟ್ ಈ ತೀರ್ಪಿನಲ್ಲಿ ಸೂಚ್ಯವಾಗಿ ಹೇಳಿದೆ.
Related Articles
Advertisement
ಇಂಥ ಪ್ರತಿಭಟನೆಗಳ ಹಿಂದಿನ ಆತಂಕದ ಬಗ್ಗೆಯೂ ಸುಪ್ರೀಂ ಕೋರ್ಟ್ ಹೇಳಿರುವುದನ್ನು ಗಮನಿಸಬೇಕು. ಶಹೀನ್‌ಬಾಗ್ ಪ್ರತಿಭಟನೆಯಲ್ಲಿ ನಾಯಕತ್ವದ ಕೊರತೆ ಇತ್ತು, ಹಲವು ಗುಂಪುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಇವುಗಳು ತಮ್ಮ ಸ್ವಹಿತಾಸಕ್ತಿ ಈಡೇರಿಸಿಕೊಳ್ಳಲು ಹವಣಿಕೆ ಮಾಡುವ ಸಂಭವವು ಇತ್ತು. ಹೀಗಾಗಿ, ಅಂದಿನ ಶಹೀನ್ ಬಾಗ್ ಹೋರಾಟ, ಮಹಿಳೆಯರ ಧ್ವನಿಯನ್ನು ಸಶಕ್ತಗೊಳಿಸುವ ಏಕೈಕ ಧ್ವನಿಯಾಗಿ ಉಳಿದಿರಲಿಲ್ಲ. ಅಷ್ಟೇ ಅಲ್ಲದೆ ಪ್ರತಿಭಟನೆಯನ್ನು ಹಿಂಪಡೆಯುವ ಅಧಿಕಾರವನ್ನೂ ಆ ಮಹಿಳೆಯರು ಹೊಂದಿರಲಿಲ್ಲ ಎಂಬ ಅಂಶವನ್ನು ಉಲ್ಲೇಖೀಸಿದೆ.
ಜತೆಗೆ ಸಾರ್ವಜನಿಕರಿಗೆ ತೊಂದರೆ ನೀಡುವಂಥ ಸ್ಥಳದಲ್ಲಿ ಯಾರಾದರೂ ಪ್ರತಿಭಟನೆ ಅಥವಾ ಧರಣಿ ನಡೆಸುತ್ತಿದ್ದರೂ ಆಡಳಿತಶಾಹಿ ಅವರನ್ನು ಅಲ್ಲಿಂದ ಕಳುಹಿಸಬಹುದು ಎಂಬ ಮಾತುಗಳನ್ನೂ ಸುಪ್ರೀಂ ಕೋರ್ಟ್ ಹೇಳಿದೆ. ಮುಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿಗಳು ಉದ್ಭವವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ನಿಗದಿತ ಸ್ಥಳದಲ್ಲಿ ಪ್ರತಿಭಟನೆಗಳು ನಡೆಯಲಿ, ಧರಣಿ, ಹೋರಾಟದ ವೇಳೆ ಮಾತುಕತೆಗೂ ಆಸ್ಪದವಿರಲಿ. ಆದರೆ, ಯಾವುದೇ ಕಾರಣಕ್ಕೂ ಪ್ರತಿಭಟನೆಗಳು ಕೈಮೀರಿ ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಧೀಶರು ಖಡಕ್ಕಾಗಿಯೇ ಹೇಳಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕೋರ್ಟ್ ಹೇಳಿರುವ ಅಂಶಗಳು ಒಪ್ಪತಕ್ಕಂತವುಗಳೇ ಆಗಿವೆ. ದಿಢೀರನೇ ರಸ್ತೆ ತಡೆ ನಡೆಸುವುದು, ರಸ್ತೆ ಮಧ್ಯದಲ್ಲಿ ಕುಳಿತು ಸಂಚಾರಕ್ಕೆ ನಿರ್ಬಂಧ ಒಡ್ಡುವುದು, ಜನರ ಓಡಾಟಕ್ಕೆ ಅನುಮತಿ ನೀಡದೇ ಇರುವುದು, ಎಷ್ಟೋ ಬಾರಿ ಈ ಟ್ರಾಫಿಕ್ ಜಾಮ್‌ನಲ್ಲಿ ಆ್ಯಂಬುಲೆನ್ಸ್‌ಗಳೇ ಸಿಲುಕಿರುವ ಘಟನೆಗಳೂ ನಡೆದಿವೆ. ಈ ಅಂಶಗಳನ್ನು ಗಮನಿಸಿದರೆ ಸುಪ್ರೀಂ ತೀರ್ಪು ಸರಿ ಅನ್ನಿಸುತ್ತದೆ.