Advertisement

ರೋಡ್‌ ಬ್ರೇಕ್‌ಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

03:21 PM Oct 22, 2019 | Suhan S |

ನಿಡಗುಂದಿ: ಬೈಕ್‌ ಮತ್ತು ಲಾರಿ ಅಪಘಾತದಿಂದ ಬೈಕ್‌ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಪಟ್ಟಣದ ಮುದ್ದೇಬಿಹಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಇಂಚನಾಳ ತಾಂಡಾದ ಜಮಲಪ್ಪ ರಾಠೊಡ (55) ಮೃತಪಟ್ಟ ವ್ಯಕ್ತಿ. ಈತ ಮುದ್ದೇಬಿಹಾಳದಿಂದ ಆಲಮಟ್ಟಿಗೆ ಬೈಕ್‌ನಲ್ಲಿ ಹೋಗುವಾಗ ಮುದ್ದೇಬಿಹಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಚಿತ್ರದುರ್ಗದ ಕಡೆ ಹೊರಟ ಲಾರಿ ಹಾಯ್ದು ಅಪಘಾತವಾಗಿದೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ: ಕಳೆದೆರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರೀಕರಣ ನಡೆಸಿದ ಸಂದರ್ಭದಲ್ಲಿ ಮುದ್ದೇಬಿಹಾಳ ಕ್ರಾಸ್‌ ಬಳಿ ಈ ಮೊದಲಿದ್ದ ರೋಡ್‌ ಬ್ರೇಕ್‌ಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ವಾಹನಗಳು ವೇಗವಾಗಿ ಚಲಿಸುತ್ತಿದ್ದು ಅಪಘಾತಗಳಿಗೆ ಕಾರಣವಾಗಿದೆ. ಕೂಡಲೇ ರೋಡ್‌ ಬ್ರೇಕ್‌ ಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಕನ್ನಡಪರ, ರೈತ ಪರ ಸಂಘಟನೆಗಳು ಹಾಗೂ ಪಟ್ಟಣದ ನಾಗರಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಶಿವಾನಂದ ಮುಚ್ಚಂಡಿ, ಪ್ರಲ್ಹಾದ ಪತ್ತಾರ ಸಂಬಂಧಿಸಿದ ಅಧಿಕಾರಿಗಳ ಬಳಿ ತೆರಳಿ ಚರ್ಚಿಸಿ ಸಂಜೆ ವೇಳೆಗೆ ಮುದ್ದೇಬಿಹಾಳ ಕ್ರಾಸ್‌ ಹಾಗೂ ಬಸ್‌ನಿಲ್ದಾಣ ಬಳಿ ಎರಡೂ ಕಡೆ ರೋಡ್‌ ಬ್ರೇಕ್‌ ಹಾಕಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next