Advertisement

ಪ್ರತಿಭಟನೆ ವಾಪಸ್‌ ಪಡೆದ ಸ್ವಚ್ಛತಾ ಗುತ್ತಿಗೆದಾರರು

11:44 AM Jun 12, 2018 | Team Udayavani |

ಬೆಂಗಳೂರು: ಬಾಕಿ ಬಿಲ್‌ ಪಾವತಿಗೆ ಒತ್ತಾಯಿಸಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಗುತ್ತಿಗೆದಾರರು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ, ಗುತ್ತಿಗೆದಾರರೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮಂಗಳವಾರದಿಂದ ಎಂದಿನಂತೆ ತ್ಯಾಜ್ಯ ವಿಲೇವಾರಿ ನಡೆಯಲಿದೆ. 

Advertisement

ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ತ್ಯಾಜ್ಯ ಸಾಗಣೆ ಲಾರಿ ಮಾಲೀಕರು, ಗುತ್ತಿಗೆದಾರರು ಸೊಮವಾರದಿಂದ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದರು. ಪರಿಣಾಮ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗಿತ್ತು. ಇದರೊಂದಿಗೆ ವಿವಿಧ ಬಡಾವಣೆಗಳ ಖಾಲಿ ಸ್ಥಳಗಳಲ್ಲಿ ತ್ಯಾಜ್ಯ ಸುರಿದ ಪರಿಣಾಮ ಜನ ತೊಂದರೆ ಅನುಭವಿಸುವಂತಾಗಿತ್ತು.

ಕೂಡಲೇ ಎಚ್ಚೆತ್ತ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌, ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಎರಡು ದಿನಗಳಲ್ಲಿ ಬಾಕಿ ಬಿಲ್‌ ಪಾವತಿ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಹಿಂಪಡೆದಿದ್ದು, ಬೇಡಿಕೆಗಳನ್ನು ಈಡೇರಿಸಲು ಪಾಲಿಕೆಗೆ ಒಂದು ವಾರ ಗಡುವು ನೀಡಿದ್ದಾರೆ.

“ಅಧಿಕಾರಿಗಳು ಗುತ್ತಿಗೆದಾರರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದು, ಜನರ ದೃಷ್ಟಿಯಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಬಿಲ್‌ ಬಾಕಿ ಉಳಿಯಲು ಅಧಿಕಾರಿಗಳೇ ನೇರ ಕಾರಣರಾಗಿದ್ದಾರೆ’ ಎಂದು ಸಂಧಾನ ಸಭೆಯಲ್ಲಿ ಗುತ್ತಿಗೆದಾರರು ದೂರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌, ಗುತ್ತಿಗೆದಾರರ ಬೇಡಿಕೆಗಳು ಸಮರ್ಪಕವಾಗಿವೆ. ಹೀಗಿದ್ದರೂ, ಅದನ್ನು ಈಡೇರಿಸಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಎಲ್ಲೆಲ್ಲೂ ತ್ಯಾಜ್ಯರಾಶಿ: ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಒಂದು ದಿನ ಪ್ರತಿಭಟನೆ ನಡೆಸಿದ ಪರಿಣಾಮ, 4 ಸಾವಿರ ಟನ್‌ ಕಸ ವಿಲೇವಾರಿಯಾಗದೆ ನಗರದ ಪ್ರಮುಖ ರಸ್ತೆಗಳ ಇಕ್ಕೆಲ ಹಾಗೂ ಬ್ಲಾಕ್‌ಸ್ಪಾಟ್‌ಗಳಲ್ಲಿಯೇ ಉಳಿಯಿತು. ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ನಾಲ್ಕು ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಂಗ್ರಹಿಸಲು ನಾಲ್ಕು ಸಾವಿರಕ್ಕೂ ಹೆಚ್ಚಿನ ಆಟೊ ಟಿಪ್ಪರ್‌,

Advertisement

450ಕ್ಕೂ ಹೆಚ್ಚಿನ ಕಾಂಪ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಏಳು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುತ್ತಿದ್ದಾರೆ. ಆದರೆ, ಸೋಮವಾರ ಏಕಾಏಕಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡ ಕಾರಣ, ಭಾನುವಾರದ ತ್ಯಾಜ್ಯ ನಗರದಲ್ಲೇ ಉಳಿದಿದ್ದು, ತ್ಯಾಜ್ಯ ವಿಲೇವಾರಿ ಸಹಜ ಸ್ಥಿತಿಗೆ ಬರಲು ಎರಡು ಮೂರು ದಿನಗಳು ಬೇಕಾಗುತ್ತದೆ.

ಬುಧವಾರ ಮತ್ತೂಂದು ಸಭೆ: ಗುತ್ತಿಗೆದಾರರ ಇತರೆ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಲು ಗುತ್ತಿಗೆದಾರರು ಕೋರಿದ್ದಾರೆ. ಅದಕ್ಕೆ ಪರಮೇಶ್ವರ್‌ ಅವರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಗುತ್ತಿಗೆದಾರರೊಂದಿಗೆ ಮತ್ತೂಂದು ಸಭೆ ನಡೆಯಲಿದೆ.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಸಮಸ್ಯೆಯಿದ್ದರೆ ಗುತ್ತಿಗೆದಾರರು ಅಧಿಕಾರಿಗಳು, ಸರ್ಕಾರದೊಂದಿಗೆ ಮಾತನಾಡಬೇಕು. ಆದರೆ, ಏಕಾಏಕಿ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆಗಳನ್ನು ನೀಡುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜತೆಗೆ ಬಗೆಹರಿಯಬೇಕಾದ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ ಎಂದು ಸೂಚ್ಯವಾಗಿ ತಿಳಿ ಹೇಳಿದರು.

ಉಪಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಬಾಕಿ ಬಿಲ್‌ ಪಾವತಿಸುವ ಭರವಸೆ ನೀಡಿದ್ದು, ಇತರೆ ಬೇಡಿಕೆಗಳನ್ನು ಅರಿಯಲು ಬುಧವಾರ ಮತ್ತೆ ಸಭೆ ಕರೆದಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಪಡೆದಿದ್ದು, ಮಂಗಳವಾರದಿಂದ ತ್ಯಾಜ್ಯ ವಿಲೇವಾರಿ ಎಂದಿನಂತೆ ನಡೆಯಲಿದೆ.
-ಬಾಲಸುಬ್ರಹ್ಮಣ್ಯ, ಗುತ್ತಿಗೆದಾರರ ಸಂಘದ ಪ್ರ.ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next