ರಾಮನಗರ: ಲಂಚ ಕೊಡದಿದ್ದಕ್ಕೆ ಪಿಡಿಒ ನರೇಗಾ ವೈಯಕ್ತಿಕ ಕಾಮಗಾರಿಯ ಬಿಲ್ ಕೊಡದೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ, ರೈತ ಗ್ರಾಪಂ ಕಚೇರಿ ಎದುರು ಕುರಿ, ಮೇಕೆಗಳ ಜೊತೆ ಪ್ರತಿಭಟನೆ ನಡೆಸಿದ ಪ್ರಸಂಗ ಚನ್ನಪಟ್ಟಣ ತಾಲೂಕಿನ ಮೈಲ ನಾಯ್ಕನಹಳ್ಳಿ ಗ್ರಾಪಂನಲ್ಲಿ ನಡೆದಿದೆ.
ಮೈಲನಾಯ್ಕನಹಳ್ಳಿ ಗ್ರಾಮದ ರೈತ ರವಿ ಎಂಬುವರು 50ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳನ್ನು ಸಾಕಿ ಕೊಂಡು ಜೀವನ ಸಾಗಿಸುತ್ತಿದ್ದು, ವರ್ಷದ ಹಿಂದೆ ಕುರಿಶೆಡ್ ನಿರ್ಮಾಣ ಮಾಡಿದ್ದರು. ಇದಕ್ಕೆ ನರೇಗಾ ಯೋಜನೆಯಲ್ಲಿ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದರು. ನಿಯಮಾನುಸಾರ ಕಾಮಗಾರಿ ನಿರ್ಮಾಣ ಮಾಡಿದ್ದರೂ, ಇವರಿಗೆ ಯೋಜನೆಯ ಹಣ ಬಿಡುಗಡೆಗೆ ಪಿಡಿಒ ಪಂಚಾಯ್ತಿ ಕಚೇರಿಗೆ ಅಲೆದಾಡಿಸುತ್ತಿದ್ದರು. ಇದರಿಂದ ರೋಸಿ ಹೊದ ರೈತ ಕುರಿ, ಮೇಕೆಗಳನ್ನು ಪಂಚಾ ಯ್ತಿ ಕಚೇರಿ ಮುಂಭಾಗ ಕೂಡಿ ಹಾಕಿ ಪ್ರತಿಭಟಿಸಿದರು.
ಪಂಚಾಯ್ತಿಯೇ ಕೊಟ್ಟಿಗೆ: ನಾನು ನ್ಯಾಯಯುತವಾಗಿ ಕಾಮಗಾರಿ ನಡೆಸಿದ್ದೇನೆ. ಈ ಹಿಂದೆ ಸಹ ಇದೇ ಪಿಡಿಒ ನರೇಗಾ ಕಾಮಗಾರಿಯಲ್ಲಿ ನನಗೆ ಬರಬೇ ಕಾದ ಹಣವನ್ನು ಬೇರೊಬ್ಬರ ಹೆಸರಿನಲ್ಲಿ ಹಾಕಿ ಕೊಂಡು ವಂಚಿಸಿದ್ದರು. ಈ ಬಾರಿ ಪೂರ್ಣ ಬಿಲ್ ಪಾವತಿ ಮಾಡದೆ ನನ್ನ ಜೊತೆ ಆಟವಾಡುತ್ತಿದ್ದಾರೆ. ನನಗೆ ಕೊಟ್ಟಿಗೆ ನಿರ್ಮಾಣದ ಹಣ ಕೊಡುವವರೆಗೆ ನಾನು ಗ್ರಾಪಂ ಕಚೇರಿಯನ್ನೇ ಕೊಟ್ಟಿಗೆ ಮಾಡಿ ಕೊಳ್ಳುತ್ತೇನೆ. ಇಲ್ಲೇ ಕುರಿಗಳನ್ನು ಸಾಕುತ್ತೇನೆ ಎಂದು ಪಟ್ಟುಹಿಡಿದರು.
ಹಿರಿಯ ಅಧಿಕಾರಿಗಳು ಗಮನಹರಿಸಿಲ್ಲ: ಪಿಡಿಒ ಬಿಲ್ ನೀಡುತ್ತಿಲ್ಲ ಎಂಬ ಸಂಗತಿಯನ್ನು ಕ್ಷೇತ್ರದ ಶಾಸಕರು, ಸಿಇಒ, ತಾಪಂ ಇಒ ಗಮನಕ್ಕೆ ತಂದಿದ್ದೇನೆ. ಯಾರೂ ನನ್ನ ಸಮಸ್ಯೆಗೆ ಸ್ಪಂದಿಸಿಲ್ಲ. ನಾನು ಕುರಿ ಶೆಡ್ ನಿರ್ಮಾಣಕ್ಕೆ ಸಾಲ ಮಾಡಿ ಹಣ ಹಾಕಿದ್ದು, ನರೇಗಾ ಬಿಲ್ ಬಂದಲ್ಲಿ ಒಂದಿಷ್ಟು ಅನುಕೂಲ ಆಗುತಿತ್ತು. ನನ್ನ ಬಳಿ ಹಣವಿಲ್ಲದ ಕಾರಣ ಲಂಚ ನೀಡಲು ಆಗುತ್ತಿಲ್ಲ. ಹಣ ನೀಡಿಲ್ಲ ಎಂಬ ಕಾರಣಕ್ಕೆ ನನಗೆ ಯೋಜನೆ ತಪ್ಪಿಸಿದ್ದು, ನನಗೆ ನ್ಯಾಯಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ರೈತನ ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ಚನ್ನಪಟ್ಟಣ ತಾಪಂ ಇಒ ಶಿವಕುಮಾರ್ ಶನಿವಾರ ಗ್ರಾಪಂ ಕಚೇರಿಗೆ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇಒ ಮನವೊಲಿಕೆಯ ಹಿನ್ನೆಲೆಯಲ್ಲಿ ರವಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಲಂಚ ಕೊಡದಿದ್ದಕ್ಕೆ ಹಣ ನೀಡುತ್ತಿಲ್ಲ : ನರೇಗಾ ಯೋಜನೆಯ ಎಲ್ಲಾ ನಿಯಮಗಳನ್ನು ನಾನು ಪೂರೈಸಿದ್ದೇನೆ. ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ಬಿಲ್ ಮಾಡಿಕೊಡಲು ಲಂಚ ಕೇಳಿದ್ದರು. ನಾನು ಕೊಡಲಿಲ್ಲ ಎಂಬ ಕಾರಣಕ್ಕೆ ಪಂಚಾಯ್ತಿ ಕಚೇರಿಗೆ ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ನನಗಿಂತ ತಡವಾಗಿ ಕೊಟ್ಟಿಗೆ ನಿರ್ಮಾಣ ಮಾಡಿವರಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತ ರೈತ ರವಿ ಆರೋಪಿಸಿದರು.
ನನ್ನ ಮನವಿಗೆ ಯಾರೂ ಸ್ಪಂದಿಸದಿರುವ ಕಾರಣ ಪ್ರತಿಭಟನೆ ನಡೆಸಿದ್ದೇನೆ. ಅಧಿಕಾರಿಗಳು ನುಡಿದಂತೆ ನಡೆಯದೇ ಹೋದಲ್ಲಿ ಶನಿವಾರ ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಪಿಡಿಒ ನೀಡುತ್ತಿರುವ ತೊಂದರೆಯಿಂದ ನಾನು ರೋಸಿ ಹೋಗಿದ್ದೇನೆ. ಶನಿವಾರ ಸಮಸ್ಯೆ ಪರಿಹಾರವಾಗದಿದ್ದರೆ ಯಾವುದೇ ಕಾರಣಕ್ಕೂ ಕಾಯುವುದಿಲ್ಲ.
● ರವಿ, ಮೈಲನಾಯ್ಕನಹಳ್ಳಿ, ರೈತ
ರೈತನ ಸಮಸ್ಯೆ ಬಗ್ಗೆ ಗ್ರಾಪಂ ಪಿಡಿಒ ಜೊತೆ ಮಾತನಾಡಿದ್ದೇನೆ. ಶನಿವಾರ ನಾನೇ ಪಂಚಾಯ್ತಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸುತ್ತೇನೆ.
● ಶಿವಕುಮಾರ್, ತಾಪಂ ಇಒ, ಚನ್ನಪಟ್ಟಣ