ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿಗೆ ತಡೆ ಕುರಿತು ಅಧಿ ವೇಶನದಲ್ಲಿ ಚರ್ಚಿಸುವುದಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಆಶ್ವಾಸನೆ ನೀಡಿದ್ದು, ಕ್ರಮ ಕೈಗೊಳ್ಳದಿದ್ದಲ್ಲಿ ಪುನಃ ಹೋರಾಟ ಮುಂದುವರಿ ಸುವುದಾಗಿ ತುಂಗಭದ್ರಾ ಎಡದಂಡೆ ಕಾಲುವೆ ಹಿತರಕ್ಷಣಾ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ನೀರಾವರಿ ನಡೆಯುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೆಸಿ ಸಮಗ್ರ ವಿವರ ಒಳಗೊಂಡ ವರದಿ ಸಲ್ಲಿಸಲಾಗಿದೆ. ಆದರೂ ಜಲ ಸಂಪನ್ಮೂಲ ಸಚಿವರು ಕ್ರಮಕ್ಕೆ ಮೀನಾಮೇಷ ಎಣಿಸುತ್ತಿದ್ದು, ಈಗ ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ನೀಡಿದ ಮಾತಿನಂತೆ ಅಧಿವೇಶನ ಬಳಿಕ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಈಚೆಗೆ ಬೆಂಗಳೂರಿನಲ್ಲಿ ಸಚಿವರ ಜೊತೆ ಟಿಎಲ್‌ಬಿಸಿ ಮೇಲ್ಭಾಗದ ಮತ್ತು ಕೆಳಭಾಗದ ರೈತ ಮುಖಂಡರು, ಜನಪ್ರತಿನಿಧಿ ಗಳು ಸಭೆನಡೆಸಿ ಚರ್ಚಿಸಲಾಗಿದೆ. ಮೇಲ್ಭಾಗದ 1 ಲಕ್ಷಕ್ಕೂ ಅಧಿ ಕ ಎಕರೆ ಭೂಮಿಯಲ್ಲಿ ಅಕ್ರಮ ನೀರಾವರಿ ನಡೆಯುತ್ತಿದೆ ಎನ್ನುವ ಕುರಿತು ಸರ್ಕಾರವೇ ವರದಿ ನೀಡಿದೆ. ಅಲ್ಲಿ ಅರ್ಹ ರೈತರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ವಿದ್ಯುತ್ ಹಾಗೂ ನೀರು ಹಾಡಹಗಲೇ ಕದಿಯುವ ಮೂಲಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು.
ಸಮಿತಿ ಸದಸ್ಯರು ಈಗಾಗಲೇ ಸಿಂಧನೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿ ಸಾಕಷ್ಟು ಅಕ್ರಮ ಪೈಪ್ ತೆರವುಗೊಳಿಸಿದ್ದಾರೆ. ಆಗ ತಾತ್ಕಾಲಿಕವಾಗಿ ಅಕ್ರಮಕ್ಕೆ ಕಡಿವಾಣ ಬಿದ್ದಿತ್ತು. ಈಗ ಪುನಃ ಮೇಲ್ಭಾಗದಲ್ಲಿ ಅಕ್ರಮ ನಿರು ಪಡೆಯುತ್ತಿದ್ದು, ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಧಿಕಾರಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು. ಸಂಘಟನೆ ಮುಖಂಡ ಚಾಮರಸ ಮಾಲಿಪಾಟೀಲ್ ಮಾತನಾಡಿ, ರಾಜ್ಯದ ನಾನಾ ಕಡೆ ಅಕ್ರಮ ನೀರಾವರಿ ನಡೆಯುತ್ತಿದ್ದು, ಅಧಿವೇಶದಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಒಂದು ವೇಳೆ ಅಧಿವೇಶನ ಬಳಿಕವೂ ಅಕ್ರಮ ತಡೆಯದಿದ್ದಲ್ಲಿ ಅನಿರ್ದಿಷ್ಟಾವ ಧಿ ಧರಣಿ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ನಾಗನಗೌಡ ಹರವಿ, ಖಾಜಾ ಅಸ್ಲಂಪಾಷಾ ಇದ್ದರು.