ಕೆ.ಆರ್.ಪುರ: ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವುದು ಮತ್ತು ಹದಗೆಟ್ಟಿರುವ ರಸ್ತೆ ದುರಸ್ತಿಗೆ ಒತ್ತಾಯಿಸಿ ಕಲ್ಕೆರೆ ಮತ್ತು ಹೊರಮಾವು ಭಾಗದ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು, ಶನಿವಾರ ಸ್ಥಳೀಯ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹೊರಮಾವು ಮತ್ತು ಕಲ್ಕೆರೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟಿಸಿದ 250ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ನಿವಾಸಿಗಳು, ಜಯಂತಿನಗರ ಜಂಕ್ಷನ್ ಬಳಿ ಶನಿವಾರ ಮಾನವ ಸರಪಳಿ ನಿರ್ಮಿಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಕೆ.ಚನ್ನಸಂದ್ರದಿಂದ ಹೊರಮಾವು ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಕಲ್ಕೆರೆ, ಹೊರಮಾವು ಪ್ರದೇಶದ ಬಡಾವಣೆಗಳಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸದೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆ ಕಾವೇರಿ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸುವ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿತ್ತು.
ಆದರೆ, ಕಾಮಗಾರಿ ಮುಗಿದ ಬಳಿಕ ರಸ್ತೆಯನ್ನು ವೈಜ್ಞಾನಿಕವಾಗಿ ಸಮತಟ್ಟು ಮಾಡಿಲ್ಲ. ಇದರಿಂದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇತ್ತಿಚಿಗೆ ಯುಜಿಡಿ ಕಾಮಗಾರಿ ಆರಂಭಿಸಿದ ನಂತರವಂತೂ ರಸ್ತೆಯಲ್ಲಿ ಸಂಚರಿಸುವುದೇ ದುಸ್ಥರವಾಗಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು,
ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಗಳಲ್ಲಿ ವಾಹನಗಳು ಹೂತು ಹೋಗುತ್ತಿವೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಮತ್ತು ಕಾಮಗಾರಿ ನಂತರ ರಸ್ತೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ. ನಾವು ಕಟ್ಟುವ ತೆರಿಗೆ ಹಣಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಮಮೂರ್ತಿನಗರ ಮತ್ತು ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ 40 ಕಿ.ಮೀ ವ್ಯಾಪ್ತಿಯಲ್ಲಿ ಯುಜಿಡಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಅದನ್ನು ಗೆದ್ದಲಹಳ್ಳಿಯ ಎಸ್‌ಟಿಪಿ ಘಟಕಕ್ಕೆ ಸಂಪರ್ಕಿಸಬೇಕಿರುವ ಕಾರಣ ಕಾಮಗಾರಿ ತಡವಾಗಿದೆ.
-ರಮೇಶ್, ಎಇಇ