Advertisement

ಶಿಕ್ಷಕರಿಂದ ಇಂದು ಪ್ರತಿಭಟನೆ

06:37 AM Nov 09, 2018 | |

ಬೆಂಗಳೂರು: ಕಳೆದ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿಸುವುದು ಮತ್ತು ಬೆಳಗಾವಿ ಅಧಿವೇಶನದಲ್ಲಿ
ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿರುವ ಅವೈಜ್ಞಾನಿಕ ನಿಯಮಗಳನ್ನು ತಿದ್ದುಪಡಿ ಮಾಡಲು ಹಾಗೂ ರದ್ದುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ ವತಿಯಿಂದ ನ.9 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಮಾಲತೇಶ ಬಬ್ಬಜ್ಜಿ ಮಾತನಾಡಿ, ದಂಪತಿ ಪ್ರಕರಣ ಹೊರತುಪಡಿಸಿ ರೂಪಿಸಿರುವ ಇತರೆ ಮಹಿಳಾ ಮತ್ತು ಪುರುಷ ಶಿಕ್ಷಕರು ಎಂಬ ಆದ್ಯತೆ ರದ್ದುಗೊಳಿಸಿ ಸೇವಾ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿ ಅಂದು ಬೆಳಗ್ಗೆ 10ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು
ತಿಳಿಸಿದರು.

ಕಳೆದ 2-3 ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾ ಗಿತ್ತು. ವಿಧಾನಸಭಾ ಚುನಾವಣೆಯಿಂದಾಗಿ
ಕಳೆದ ವರ್ಷ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಲಿಲ್ಲ. ಈಗ ಮುಂದುವರಿದ ವರ್ಗಾವಣೆ ಪ್ರಕ್ರಿಯೆಯನ್ನು ಶಿಕ್ಷಣ
ಇಲಾಖೆ ಅರ್ಧದಲ್ಲಿಯೇ ನಿಲ್ಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ನಡೆಸಲು ಉದ್ದೇಶಿಸಿದೆ. ಇದರಿಂದ ವರ್ಗಾವಣೆ
ಬಯಸಿದ ಶಿಕ್ಷಕರಿಗೆ ನಿರಾಸೆಯುಂಟಾಗಿದೆ.  ಶಿಕ್ಷಣ ಇಲಾಖೆ ಕೂಡಲೇ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಿ ಮುಂದಿನ ವರ್ಷ ವರ್ಗವಾದ ಶಾಲೆಗಳಿಗೆ ಶಿಕ್ಷಕರನ್ನು
ನಿಯೋಜಿಸಲಿ ಎಂದರು.

ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ಹಲವು ಅವೈಜ್ಞಾನಿಕ ನಿಯಮಗಳಿವೆ. ಇದರಿಂದ ವರ್ಗಾವಣೆ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಲಿದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಯಲ್ಲಿರುವ ಅವೈಜ್ಞಾನಿಕ ನಿಯಮ ತಿದ್ದುಪಡಿ ಮಾಡಬೇಕು ಅಥವಾ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಶೇ.20ರಷ್ಟು ಖಾಲಿ ಹುದ್ದೆ ರದ್ದುಪಡಿಸಿ ಕೌನ್ಸೆಲಿಂಗ್‌ ಸಮಯದಲ್ಲಿ ಎಲ್ಲ ತಾಲೂಕಿನ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಹೈ.ಕ ಭಾಗದ ಶಿಕ್ಷಕರಿಗೆ ಕಡ್ಡಾಯವಾಗಿ 10 ವರ್ಷಗಳ ಸೇವೆ ಸಲ್ಲಿಸಬೇಕೆಂಬ ನಿಯಮ ಕೈ ಬಿಟ್ಟು ಅಂತಿಮ ಆದ್ಯತಾ ಪಟ್ಟಿಯಲ್ಲಿ ಪರಿಗಣಿಸಿ ಮತ್ತು ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ
ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಸಿ ವಲಯದಿಂದ ಎಲ್ಲ ವಲಯಗಳಿಗೂ ವರ್ಗಾವಣೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಅಂತರ್‌ ಘಟಕ ವರ್ಗಾವಣೆಯನ್ನು ಶೇ.6ಕ್ಕೆ ಹೆಚ್ಚಿಸಬೇಕು. ಅಂತರ್‌ ಘಟಕದಲ್ಲಿ ಕನಿಷ್ಠ ಸೇವಾವಧಿ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅವರವರ ಮೂಲ ಜಿಲ್ಲೆಗೆ ವರ್ಗಾವಣೆ ಆಗಲು ಅವಕಾಶ ಕಲ್ಪಿಸಬೇಕೆಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next