ಬೆಳಗಾವಿ: ಇತಿಹಾಸ ತಿರುಚಿ ವಿಶ್ವಗುರು ಬಸವಣ್ಣನವರ ಕುರಿತು ಪಠ್ಯ ಸೇರಿಸಿದ್ದನ್ನು ಖಂಡಿಸಿ ಜಾಗತಿಕ ಲಿಂಗಾಯತ ಸಂಘಟನೆ ಪದಾಧಿಕಾರಿಗಳು ಹಾಗೂ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ವಿಶ್ವಗುರು ಬಸವಣ್ಣನವರ ಕುರಿತ ಚರಿತ್ರೆ ಪರಿಷ್ಕೃತಗೊಳಿಸಿ ಈ ವರ್ಷ ಪಾಠದಲ್ಲಿ ಸೇರಿಸಲಾಗಿದೆ. ಇದರಿಂದ ತಪ್ಪು ಮಾಹಿತಿ ಮಕ್ಕಳಲ್ಲಿ ಬಿತ್ತುವ ಕೆಲಸ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಬಸವಣ್ಣನವರು ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಬರೆದಿರುವುದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋಗಿರುವುದು ಐತಿಹಾಸಿಕ ಸಂಗತಿ. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು ಎಂದು ಸೇರಿಸಿದ್ದು ತಪ್ಪು. ಶೈವ ಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು. ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದುದು. ಅವರೇ ಇಷ್ಟಲಿಂಗದ ಜನಕರು, ಅಲ್ಲಮ ಪ್ರಭುದೇವರಾದಿಯಾಗಿ ಎಲ್ಲ ಶರಣರು ವಚನಗಳಲ್ಲಿ ಇದನ್ನು ಉಲ್ಲೇಖೀಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ ಎಂದು ಚನ್ನಬಸವಣ್ಣನವರು ಉಲ್ಲೇಖೀಸಿದ್ದಾರೆ. ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ. ವೀರಶೈವ ಮತ ಅಭಿವೃದ್ಧಿಪಡಿಸಿದರು ಎಂದು ಈಗ ಪಠ್ಯದಲ್ಲಿ ಸೇರಿಸಲಾಗಿದೆ.
ಇದು ಶುದ್ಧ ವೀರಶೈವ ಶೈವದ ಶಾಖೆ. ಅದು ಮತವಿರಬಹುದು. ಈಗ ಅದನ್ನು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಮತ್ತು ನಾಡಗೀತೆ ಬಗ್ಗೆಯೂ ಅವಹೇಳನಕಾರಿ ವಿಷಯ ಪ್ರಕಟವಾಗಿರುವುದು ಸರಿಯಾದ ರೀತಿಯಲ್ಲ. ಇದು ಖಂಡನೀಯ. ಅದನ್ನೂ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಶಂಕರ ಗುಡಸ, ಅರವಿಂದ ಪಾರುಶೆಟ್ಟಿ, ಎ.ವೈ. ದಂಡಿಗೇರಿ, ಎಸ್.ಜಿ. ಸಿದ್ನಾಳ, ಬಿ.ಎಸ್. ಸುಲ್ತಾನಪುರಿ, ಸತೀಶ ಚೌಗಲಾ, ಸಿ.ಎಂ. ಬೂದಿಹಾಳ ಸೇರಿದಂತೆ ಇತರರು ಇದ್ದರು.