ವಾಡಿ: ಕೆಲಸ ಕೇಳಿಬರುವ ಗ್ರಾಮೀಣ ಭಾಗದ ಜನರಿಗೆ ಅಧಿಕಾರಿಗಳು ಉದ್ಯೋಗ ಖಾತ್ರಿಪಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಾಲವಾರ ಗ್ರಾಪಂ ನರೇಗಾ ಕಾರ್ಮಿಕರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ, ನಾಲವಾರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕೆಲಸಕ್ಕಾಗಿ ಬೇಡಿಕೆಯಿಟ್ಟು ನಮೂನೆ-6ರಲ್ಲಿ ಕಾರ್ಮಿಕರು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಕೆಲಸ ಒದಗಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ತಿಂಗಳಿಗೆ ಮೂರು ನಾಲ್ಕು ದಿನ ಕೆಲಸ ನೀಡಿದರೆ ಬಡ ಕುಟುಂಬಗಳು ಬದುಕಲು ಸಾಧ್ಯವಿಲ್ಲ. ಕೂಲಿ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಹಳ್ಳಿಯ ಜನರಿಗೆ ನರೇಗಾ ಆಸರೆಯಾಗುತ್ತಿಲ್ಲ. ಇದರಿಂದ ಸರ್ಕಾರದ ಉದ್ಯೋಗ ಖಾತ್ರಿ ಆಶಯ ಈಡೇರುತ್ತಿಲ್ಲ ಎಂದು ಆಪಾದಿಸಿದರು.
ಮಹಿಳಾ ಕಾರ್ಮಿಕರನ್ನು ಗೌರವದಿಂದ ಕಾಣಬೇಕಾದ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಕೆಲಸ ಕೇಳಲು ಕಚೇರಿಗೆ ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಹಸಿವು ನೀಗಿಸಿಕೊಳ್ಳಲು ಮುಂದಾದರೆ ಅವಮಾನಿಸಿ ಕಳುಹಿಸಲಾಗುತ್ತಿದೆ. ಬಡವರ ಬಗ್ಗೆ ನಾಲವಾರ ಗ್ರಾಪಂ ಅಧಿಕಾರಿಗಳಿಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಯಬಣ್ಣ ಗುಡುಬಾ, ಉದ್ಯೋಗ ನೀಡದೇ ವಂಚಿಸುತ್ತಿರುವ ಮತ್ತು ಮಹಿಳಾ ಕಾರ್ಮಿಕರನ್ನು ಅವಮಾನಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಾದ ಸಿದ್ಧಮ್ಮ ಮಳಬಾ, ತೋಟಮ್ಮ, ನಿಂಗಪ್ಪ ಹೊನಗುಂಟಿ, ಸೋಮಶೇಖರ ಪೂಜಾರಿ, ಪಾರ್ವತಿ ಮಳಬಾ ಹಾಗೂ ನೂರಾರು ನರೇಗಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.