ಕಕ್ಕೇರಾ: ಪಟ್ಟಣದಲ್ಲಿ ಸಮರ್ಪಕ ವಿದ್ಯುತ್ ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕೆಂದು ಸದಸ್ಯರಿಂದ ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್ ಅವರಿಗೆ ಗುರುವಾರ ಮನವಿ ಸಲ್ಲಿಸಿ ಆಗ್ರಹಿಸಿದರು. ಕಳೆದ ವಾರದಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೊಂದರೆ ಅನುಭವಿಸುವಂತ್ತಾಗಿದೆ. ಅಲ್ಲದೆ ಮಂಜೂರಾದ ವಸತಿ ಆಶ್ರಯ ಮನೆಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲು ಮೀನಮೇಷ ಮಾಡಲಾಗುತ್ತಿದೆ ಎಂದು ಒತ್ತಾಯಿಸಿದರು. ವರ್ಷವಾದರೂ ಪುರಸಭೆ ಸಮಾನ್ಯ ಸಭೆ ಕೂಡ ಕರೆದಿಲ್ಲ. ಸ್ಥಾಯಿ ಸಮಿತಿ ರಚನೆ ಮಾಡುವಲ್ಲಿ ವಿಳಂಭವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕೆಲವೊಂದು ದೊಡ್ಡಿಗಳಿಗೆ ವಿದ್ಯುತ್ ಇಲ್ಲದೆ ಕತ್ತಲ್ಲಲ್ಲೆ ಜೀವನ ನಡೆಸುತ್ತಿದ್ದಾರೆ. ಪ್ರಮುಖ ರಸ್ತೆಗೆ ಬೀದಿ ದೀಪಗಳ ಅಳವಡಿಕೆಗೆ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. ಆದರೂ ಯಾವುದೇ ದೀಪಗಳೂ ಅಳವಡಿಕೆ ಆಗಿಲ್ಲ ಎಂದು ಕಿಡಿಕಾರಿದರು. ಶೀಘ್ರದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದರೆ ಪುರಸಭೆಗೆ ಬೀಗ ಹಾಕಬೇಕಾಗುತ್ತದೆ ಎಂದು ಸದಸ್ಯರಾದ ರಣಕುಮಾರ ಸೊಲ್ಲಾಪುರ, ಬಸಯ್ಯಸ್ವಾಮಿ, ಆದಯ್ಯ ಗುರಿಕಾರ, ಗ್ವಾಲಪ್ಪ ಮಲ್ಕೋಜಿ, ಹೈಯಾಳಪ್ಪ ಅಬಲಿ, ಬಸಪ್ಪ ಹರಿಜನ, ನಂದಪ್ಪ ಗುಮೆದಾರ ಎಚ್ಚರಿಸಿದ್ದಾರೆ.