Advertisement

ನಾಗರಿಕರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ

04:14 AM May 04, 2019 | Team Udayavani |

ಲಾಲ್ಬಾಗ್‌: ಕುಡಿಯುವ ನೀರಿನ ಸಮಸ್ಯೆ ಸಹಿತ ನಗರದ ನಾಗರಿಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಎಂಸಿಸಿ ಸಿವಿಕ್‌ ಗ್ರೂಪ್‌ ವತಿಯಿಂದ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

Advertisement

ಗ್ರೂಪ್‌ನ ಸದಸ್ಯ ಪದ್ಮನಾಭ ಉಳ್ಳಾಲ ಮಾತನಾಡಿ, ವಿವಿಧ ಇಲಾಖೆಗಳ ಕೇಬಲ್ ಅಳವಡಿಕೆ ಕೆಲಸ ಅರ್ಧಂಬರ್ಧ ನಡೆದಿದ್ದು, ಅಲ್ಲಲ್ಲಿ ಹೊಂಡ-ಗುಂಡಿಗಳು, ನೇತಾಡುವ ಕೇಬಲ್ಗಳೇ ಕಾಣಸಿಗುತ್ತಿವೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಚರಂಡಿ ಕಾಮಗಾರಿ ನಿಧಾನಗತಿಯಿಂದ ಪಾದಚಾರಿ, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ನಗರಕ್ಕೆ ಅಸಹ್ಯವಾಗುವ ರೀತಿಯಲ್ಲಿ ಕ್ಲಾಕ್‌ ಟವರ್‌ ಕೆಲಸ ಅರ್ಧದಲ್ಲಿ ನಿಲ್ಲಿಸಿ 80 ಲಕ್ಷ ರೂ. ಪೋಲು ಮಾಡಲಾಗಿದೆ ಎಂದು ಆರೋಪಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಸರಕಾರಿ, ಜನಸಾಮಾನ್ಯರ ತೆರಿಗೆ ಹಣವನ್ನು ಉಪಯೋಗವಾಗದ ಕಾಮ ಗಾರಿಗಳಿಗೆ ಖರ್ಚು ಮಾಡಿ ಜನ ಸಾಮಾನ್ಯರ ಅಗತ್ಯ ಕಾಮಗಾರಿಗಳನ್ನು ನಡೆಸದೆ ವಂಚಿಸ ಲಾಗುತ್ತಿದೆ ಎಂದು ಆಪಾದಿಸಿದರು.

ಬಾಲ್ದಿ ಹಿಡಿದು ಪ್ರತಿಭಟನೆ
ನಗರವಾಸಿಗಳಿಗೆ ಕುಡಿಯುವ ನೀರಿನ ರೇಷನಿಂಗ್‌ ಆರಂಭಿಸಿರುವುದರ ಬಗ್ಗೆ ಜೆರಾಲ್ಡ್ ಟವರ್ ಅವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಮೈ ಮೇಲೆ ಬೈರಾಸು, ಕೈಯ್ಯಲ್ಲಿ ಖಾಲಿ ಬಾಲ್ದಿ, ಮಗ್‌, ಸಾಬೂನು ಹಿಡಿದು ನೀರಿನ ರೇಷನಿಂಗ್‌ ನಡೆಸುತ್ತಿರುವ ಪಾಲಿಕೆ ವಿರುದ್ಧ ಪ್ರತಿಭಟಿಸಿದರು.

ಪರಶುರಾಮನ ಸೃಷ್ಟಿಯ ನೆಲೆಯಲ್ಲಿ ಸಾಕಷ್ಟು ನೀರಿದ್ದರೂ ಮನಪಾ ಆಡಳಿತವು ನೀರು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಜನರನ್ನು ಸತಾಯಿಸುತ್ತಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಜಿಲ್ಲೆ ಯಲ್ಲಿಯೇ ನೀರಿನ ರೇಶನಿಂಗ್‌ ಮಾಡುವ ಪರಿಸ್ಥಿತಿ ಬಂದಿರುವುದು ನಗೆಪಾಟಲಿನ ಸಂಗತಿ ಎಂದರು.

Advertisement

ಅಜಯ್‌ ಡಿ’ಸಿಲ್ವ ಮತ್ತಿತ್ತರರು ಭಾಗವಹಿಸಿದ್ದರು.

ಕುಡಿಯುವ ನೀರಿನ ಸಮಸ್ಯೆ ಸಹಿತ ಇತರ 20 ವಿವಿಧ ಸಮಸ್ಯೆ ಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next