ಸೇಡಂ: ಕೇಂದ್ರ ಸರ್ಕಾರ 7 ವರ್ಷಗಳಿಂದ ಜಾರಿಗೆ ತರುತ್ತಿರುವ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ನಾಗಮಣಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಬಹುತೇಕ ಕಾಯ್ದೆಗಳು ಬಂಡವಾಳ ಶಾಹಿಗಳ ಪರವಾಗಿ, ಜನ ವಿರೋಧಿಯಾಗಿವೆ. ಹೊಸದಾಗಿ ರಚಿಸಲಾಗಿರುವ ನಾಲ್ಕು ಕಾರ್ಮಿಕ ಕಾಯ್ದೆಗಳಿಂದ ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ದುಡಿಯುವ ಜನರ ಕಷ್ಟಾರ್ಜಿತ ಕಾರ್ಮಿಕ ಹಕ್ಕುಗಳು, ಜನತಾಂತ್ರಿಕ ಹಕ್ಕುಗಳನ್ನು ಖಾತ್ರಿ ಪಡಿಸಬೇಕು. ರೈತ ವಿರೋಧಿ ಕರಾಳ ಕಾಯ್ದೆಗಳು, ವಿದ್ಯುತ್ ಬಿಲ್ ತಿದ್ದುಪಡಿ ಮಸೂದೆ ಜಾರಿ ತಡೆಹಿಡಿಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗ ದಿಗೊಳಿಸಬೇಕು. ಪೆಟ್ರೋಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು. ವಿಮೆ, ರಕ್ಷಣೆ, ವಿದ್ಯುತ್, ಬ್ಯಾಂಕ್, ಕಲ್ಲಿದ್ದಲು ಉಕ್ಕು, ಬಿಪಿಸಿಎಲ್, ಬಿಎಸ್ ಎನ್‌ಎಲ್, ವಿಮಾನ ನಿಲ್ದಾಣ ಖಾಸಗೀಕರಣ ಮಾಡಬಾರದು. ಕಾರ್ಪೊರೇಟ್ ಪರ ನಗದೀಕರಣ ಯೋಜನೆ ಹಿಂಪಡೆಯಬೇಕು. ಹೊಸ ಪಿಂಚಣಿ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಹಾಗೂ ವಿವಿಧ ಬೇಡಿಕೆಗಳ ಪ್ರಧಾನಿ ಮೋದಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.
ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ, ವಸತಿ ನಿಲಯ ಸಂಘಟನೆ ಜಿಲ್ಲಾ ಸಂಚಾಲಕ ರಾಘವೇಂದ್ರ ಎಂ.ಜಿ. ಲಕ್ಷ್ಮೀ ಮಳಖೇಡ, ರೂಪಾ ಕುರಕುಂಟಾ, ಸರೋಜಾ ಯಡಗಾ ಇತರರು ಇದ್ದರು.