Advertisement

ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ

07:53 AM Jul 02, 2019 | Team Udayavani |

ಕಲಬುರಗಿ: ಬಾಕಿ ವೇತನ, ಸಿಲಿಂಡರ್‌, ಮೊಟ್ಟೆ ಬಿಲ್, ಅಂಗನವಾಡಿ ಕಟ್ಟಡಗಳ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ನಗರದ ಸರ್ದಾರ ಪಟೇಲ್ ವೃತ್ತದಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬಾಕಿಯಿರುವ 5 ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು. ಅವಶ್ಯಕತೆಗೆ ತಕ್ಕಂತೆ ಸಿಲಿಂಡರ್‌ ಪೂರೈಸಿ 2017ರಿಂದ ಬಾಕಿಯಿರುವ ಸಿಲಿಂಡರ್‌ ಹಣ ಬಿಡುಗಡೆ ಮಾಡಬೇಕು. ಬಾಕಿಯಿರುವ ಮೊಟ್ಟೆ ಹಣ ಬಿಡುಗಡೆ ಮಾಡಬೇಕು. ಅಲ್ಲದೇ ಇಲಾಖೆಯಿಂದ ನಿಯಮಿತವಾಗಿ ಮೊಟ್ಟೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.

ಉರುವಲು ಕಟ್ಟಿಗೆ ಬಳಸುತ್ತಿರುವ ಕೇಂದ್ರಗಳಿಗೆ ಬಾಕಿಯಿರುವ ಹಣ ಪಾವತಿಸಬೇಕು. ಕಟ್ಟಿಗೆ ಅವಲಂಬಿತವಾಗಿರುವ ಕೇಂದ್ರಗಳಿಗೆ ಸಿಲಿಂಡರ್‌ ಪೂರೈಸಬೇಕು. ಹಿಂಬಾಕಿ ಹಣ ಬಿಡುಗಡೆ ಮಾಡಿ ಬಾಕಿಯಿರುವ ಸಾದಿಲ್ವಾರು ಹಾಗೂ ವ್ಯಕ್ತಿ ನಿಧಿ ಹಣ ಬಿಡುಗಡೆ ಮಾಡಬೇಕು. ಮಾತೃಪೂರ್ಣ ಯೋಜನೆಗಾಗಿ ನಿಗದಿಪಡಿಸಿದ ಕಾರ್ಯಕರ್ತೆಯರಿಗೆ 500 ರೂ ಹಾಗೂ ಸಹಾಯಕಿಯರಿಗೆ 250 ರೂ. ನೀಡಬೇಕು ಎಂದು ಒತ್ತಾಯಿಸಿದರು.

ವಿಳಂಬ ಮಾಡದೇ ಎಲ್ಲರಿಗೂ ಹೆರಿಗೆ ಭತ್ಯೆ ಒದಗಿಸಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತರಿಗೆ ಇಡುಗಂಟು ಒದಗಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು. ಅವಶ್ಯಕವಿರುವ ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ, ಮೇಜು, ಫ್ಯಾನ್‌, ಅಲಮಾರಿ ಮುಂತಾದ ಮೂಲಸೌಕರ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಹೊಸ ಅಂಗನವಾಡಿ ಕೇಂದ್ರ ನಿರ್ಮಿಸಬೇಕು. ಸೇಡಂ ತಾಲೂಕಿಗೆ ಖಾಯಂ ಶಿಶು ಅಭಿವೃದ್ದಿ ಅಧಿಕಾರಿ ನೇಮಿಸಬೇಕು. ಬಾಡಿಗೆಯಲ್ಲಿ ನಡೆಯುತ್ತಿರುವ ಕೇಂದ್ರಗಳಿಗೆ ಪ್ರತಿ ತಿಂಗಳು ಬಾಡಿಗೆ ಹಣ ನೀಡಬೇಕು. ಪ್ರತಿ ಎರಡು 2 ತಿಂಗಳಿಗೊಮ್ಮೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕುಂದುಕೊರತೆ ಸಭೆ ಏರ್ಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ, ಸೇಡಂ ತಾಲೂಕು ಸಂಚಾಲಕಿ ನಾಗಮಣಿ, ರೂಪಾ, ಲಕ್ಷ್ಮೀ ಕದಲಾಪುರ, ಶಿವಲೀಲಾ, ಬಸಮ್ಮ ಕುರಕುಂಟಿ, ಅಂಜನಾದೇವಿ, ಸರೋಜಾ, ಅಮೃತಾ, ಮಹಾದೇವಿ ಸೇಡಂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next