ದೋಟಿಹಾಳ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬಳೂಟಗಿ, ಶಿರಗುಂಪಿ, ಮೇಗೂರು, ಕೇಸೂರು, ಗೋತಗಿ ಮತ್ತು ಜಾಲಿಹಾಳ ಭಾಗದ ರೈತರು ಸೋಮವಾರ ದೋಟಿಹಾಳ ಗ್ರಾಮದ ಜೆಸ್ಕಾಂ ಕಚೇರಿ ಎದುರು ಪ್ರತಿಭಟಸಿದರು.
ಬಳೂಟಗಿ, ಶಿರಗುಂಪಿ, ಮೇಗೂರು, ಕೇಸೂರು, ಗೋತಗಿ ಮತ್ತು ಜಾಲಿಹಾಳ ಗ್ರಾಮಗಳು ಸೇರಿದಂತೆ ಅನೇಕ ಹಳ್ಳಿಗಳಿಗೆ ಬೇಕಾಬಿಟ್ಟಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಜೆಸ್ಕಾಂ ಹೊಣೆಗೇಡಿತನದಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆ ಕುರಿತು ಗಮನಕ್ಕೆ ತಂದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ರೈತರಿಗೆ ದಿನಕ್ಕೆ 7 ಗಂಟೆ ಮಾತ್ರ ವಿದ್ಯುತ್ ನೀಡುತ್ತಾರೆ. ಈ ವೇಳೆ ಲೋಡ್ ಶೆಡ್ಡಿಂಗ್ ಮಾಡಿದರೆ ರೈತರು ಪಾಡು ಕೇಳುವವರ್ಯಾರು? ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಗಮನಕ್ಕೆ ತಂದರು, ಎಸ್‌ಒ ಮತ್ತು ಲೈನ್‌ಮನ್ ಅವರಿಗೆ ದೂರವಾಣಿ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇವರ ನಿರ್ಲಕ್ಷ್ಯದಿಂದ ನಾಟಿ ಮಾಡಿದ ಬೆಳೆಗಳು ಸಂರ್ಪೂಣವಾಗಿ ನಾಶವಾಗುತ್ತಿದೆ. ಹೀಗಾಗಿ ಕೂಡಲೇ ಎಸ್‌ಒ ಮತ್ತು ಲೈನ್‌ಮನ್ ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಕೇಂದ್ರಕ್ಕೆ ಹೆಚ್ಚುವರಿಯಾಗಿ ಕೂಡ್ಡುರು, ತೆಗ್ಗಿಹಾಳ, ಮಾದಾಪೂರ, ಗುಡದೂರು ಸೇರಿದಂತೆ ಸುಮಾರು 7 ಹಳ್ಳಿಗಳಿಗೆ ವಿದ್ಯುತ್ ಸರಬುರಾಜ ಮಾಡಿದ ಕಾರಣ 10-15 ದಿನಗಳಿಂದ ಈ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಅದನ್ನು ಕಡಿತಗೊಳಿಸಬೇಕು. ಹಿಂದಿನ ಹಳ್ಳಿಗಳಿಗೆ ಮಾತ್ರ ವಿದ್ಯುತ್ ಸರಬರಾಜು ಮಾಡಿದರೇ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ರೈತರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು.
ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ಎಡಬ್ಲ್ಯೂ ಶ್ರೀನಾಥ ಅವರು ರೈತರಿಂದ ಮನವಿ ಪತ್ರ ಸ್ವೀಕರಿಸಿ, ಸಮಸ್ಯೆಗಳ ಬಗ್ಗೆ ಗ್ರಾಮದ ಮುಖಂಡರು ನನ್ನ ಗಮನಕ್ಕೆ ತಂದ್ದಿದಾರೆ. ರೈತರಿಗೆ ನೀಡುವ 7 ಗಂಟೆಗೆ ವಿದ್ಯುತ್ ವೇಳೆ ಪದೇ ಪದೆ ಲೋಡ್ ಶೆಡ್ಡಿಂಗ್ ಮಾಡುವುದು ತಪ್ಪು. ಅಂತಹ ಘಟನೆಗಳು ಮರುಕಳಿಸಿದರೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಲೋಡ್ ಶೆಡ್ಡಿಂಗ್ ಮಾಡುವುದು ಸರಿಯಲ್ಲ. ಕುಷ್ಟಗಿ ಕೇಂದ್ರಕ್ಕೆ ಒಳಪಡುವ 7 ಹಳ್ಳಿಗಳನ್ನು ಇದಕ್ಕೆ ಸೇರಿಸಿದ್ದರಿಂದ ಒಂದು ವಾರ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿದೆ. ಆಷಾಡ ಗಾಳಿ ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ರೈತರು ಸಹಕರಿಸಬೇಕು. ವಿದ್ಯುತ್ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.
ಬಳೂಟಗಿ, ಶಿರಗುಂಪಿ, ಮೇಗೂರು, ಕೇಸೂರು, ಗೋತಗಿ, ಕ್ಯಾದಗುಂಪಿ ಮತ್ತು ಜಾಲಿಹಾಳ ಭಾಗದ ಸುಮಾರು 100ಕ್ಕೂ ಹೆಚ್ಚು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.