ಬ್ಯಾಡಗಿ: ದೇಶ ವಿರೋಧಿ ಚಟುವಟಿಕೆ ಅಥವಾ ಹೇಳಿಕೆ ನೀಡುವವರು ಕೂಡಲೇ ಭಾರತ ಬಿಟ್ಟು ತೊಲಗಬೇಕು. ಇಲ್ಲವೇ ಅವರು ಬಯಸಿದಂತಹ ದೇಶಕ್ಕೆ ಕಳುಹಿಸಿಕೊಡಲು ಭಾರತದಲ್ಲಿ ಕೋಟ್ಯಾಂತರ ದೇಶಭಕ್ತರು ಸಿದ್ಧರಿದ್ದಾರೆ. ಇಲ್ಲಿದ್ದು ಸಮಾಜದ ಸಾಮರಸ್ಯ ಕೆಡಿಸುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕುರಿತು ಕಾನೂನಿಗೆ ತಿದ್ದುಪಡಿ ತರುವಂತೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರು ಅಗ್ರಹಿಸಿದರು.
ಪಾಕಿಸ್ತಾನ್ ಪರ ಹೇಳಿಕೆ ಖಂಡಿಸಿ ಫೆ.25 ರಂದು ಬೃಹತ್ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೂಲ್ಯ ಲಿಯೋನ್ ಎನ್ನುವ ಸೋಕಾಲ್ಡ್ ಮಹಿಳಾ ಸಾಮಾಜಿಕ ಕಾರ್ಯಕರ್ತೆ ಸಾರ್ವಜನಿಕ ಸಮಾರಂಭವೊಂದರಲ್ಲಿ ನೀಡಿರುವಂತಹ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ನಿಜವಾದ ಭಾರತೀಯರು ಯಾವುದೇ ಕಾರಣಕ್ಕೂ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕೋಟ್ಯಂತರ ದೇಶಭಕ್ತರ ಪ್ರಾಣತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಂವಿಧಾನಾತ್ಮಕವಾಗಿ ಕೊಟ್ಟಂತಹ ವಾಕ್ ಸ್ವಾತಂತ್ರ್ಯ ದುರುಪಯೋಗವಾಗುತ್ತಿದ್ದು, ಶಾಂತಿಪ್ರಿಯ ಭಾರತದ ಅಖಂಡತೆಗೆ ಧಕ್ಕೆ ತರುತ್ತಿದೆ. ಅಮೂಲ್ಯ ಲಿಯೋನ್ ಸೇರಿದಂತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರನ್ನು ನಿರ್ಧಯೆಯಿಂದ ಗಡಿ ಪಾರು ಮಾಡುವಂತೆ ಆಗ್ರಹಿಸಿದರು.
ಬಿಜೆಪಿ ಮುಖಂಡ ನಂದೀಶ್ ವೀರನಗೌಡ್ರ ಮಾತನಾಡಿ, ಅಮೂಲ್ಯ ಲಿಯೋನ್, ಆದ್ರಾ ಸೇರಿದಂತೆ ದೇಶ ವಿರೋಧಿ ಹೇಳಿಕೆ ನೀಡುವವರ ಆಸ್ತಿಗಳನ್ನು ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳು ವುದಷ್ಟೇ ಅಲ್ಲದೇ ಪಾಕಿಸ್ತಾನ್ ಅಥವಾ ಅವರು ಬಯಸಿದಂತಹ ದೇಶಕ್ಕೆ ಮೆರವಣಿಗೆ ಮಾಡಿ ಕಳುಹಿಸಿಕೊಡಲು ಸಿದ್ಧರಿರುವುದಾಗಿ ಸವಾಲೆಸೆದರು. ಮಂಜುನಾಥ ಪೂಜಾರ ಮಾತನಾಡಿ, ಸಿಂದಗಿಯಲ್ಲಿ ಪಾಕಿಸ್ತಾನ್ ಧ್ವಜ ಹಾರಾಟ ಸೇರಿದಂತೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಪರ ಘೋಷಣೆ ಕೂಗಿದ ವಿಡಿಯೋವೈರಲ್ ಪ್ರಕರಣ ಮುಂದೇನಾಯಿತು ಎಂಬುದು ಗೌಪ್ಯವಾಗಿದೆ. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಪ್ರಕಟವಾಗಬೇಕು. ಇಲ್ಲದಿದ್ದಲ್ಲಿ ದೇಶದ ವಿರುದ್ಧ ಇನ್ನಷ್ಟು ಹೇಳಿಕೆಗಳು ಹೊರಬರಲಿವೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯ ಮೆಹಬೂಬ್ ಅಗಸನಹಳ್ಳಿ, ಪುರಸಭೆ ಸದಸ್ಯ ಶಿವರಾಜ ಅಂಗಡಿ ಗ್ರಾಪಂ ಸದಸ್ಯ ನಾಗರಾಜ ಹಾವನೂರ, ಬಿಜೆಪಿ ತಾಲೂಕಾಧ್ಯಕ್ಷ ಸುರೇಶ ಅಸಾದಿ, ಈರಣ್ಣ ಬಣಕಾರ, ವಿಜಯ ಮಾಳಗಿ ಮುಖಂಡರಾದ ಅರುಣಕುಮಾರ ಪಾಟೀಲ, ಶಿವಯೋಗಿ ಗಡಾದ ಇದ್ದರು.