ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ತಾಲೂಕಿನ ರಾಗಿಹೊಸಳ್ಳಿಯಲ್ಲಿ ಗುರುವಾರ ಪ್ರತಿಭಟನೆ, ರಸ್ತೆ ತಡೆ ನಡೆಯಿತು.
ನೂರಾರು ಪ್ರತಿಭಟನಾಕಾರರು ಸಭೆ ನಡೆಸಿ ನಂತರ ರಸ್ತೆ ಮೇಲೆ ಕುಳಿತು ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ತಹಶೀಲ್ದಾರ್‌ಗೆ ಮನವಿ ನೀಡಲಾಯಿತು. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಫೆ.27 ರಂದು ಸ್ಥಳೀಯವಾಗಿ ಸಭೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ವಿಷಯವಾಗಿ ಸರಕಾರ ಅಧಿಸೂಚನೆ ಹೊರಡಿಸುವಾಗ ಜನರ ಅಭಿಪ್ರಾಯ ಸಂಗ್ರಹಿಸಿಲ್ಲ, ಜನರನ್ನು ಕತ್ತಲೆಯಲ್ಲಿ ಇಟ್ಟು ಆದೇಶ ಮಾಡಲಾಗಿದೆ. ಇದರಿಂದ ಅರಣ್ಯವಾಸಿಗಳು ಅತಂತ್ರರಾಗುವ ಆತಂಕವಿದೆ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪಿಸಿದರು.
ಅಭಯಾರಣ್ಯ ವಿಸ್ತರಣೆ ಕುರಿತು ಜನಜಾಗೃತಿ ಮೂಡಿಸಿರಲಿಲ್ಲ. ಅರಣ್ಯ ವ್ಯಾಪ್ತಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗೆ ಅರಣ್ಯಭೂಮಿ ಹಕ್ಕು ಪಡೆಯಲು ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗ ಈ ಅಧಿಸೂಚನೆಯಿಂದ ಅರಣ್ಯ ಸಾಗುವಳಿದಾರರ ಹಕ್ಕು ಕುಂಠಿತವಾಗುತ್ತದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಸ್ವತಂತ್ರತೆ ಮತ್ತು ಸ್ವಾವಲಂಬನೆ ಜೀವನಕ್ಕೆ ಆತಂಕ ಉಂಟಾಗುತ್ತದೆ ಎಂದು ಮನವಿಯಲ್ಲಿ ದೂರಲಾಗಿದೆ.
ರಾಜ್ಯ ಸರಕಾರ ಶಿವಮೊಗ್ಗ ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿ 2019 ಜುಲೈನಲ್ಲಿ ಆದೇಶ ಹೊರಡಿಸಿದೆ. 1978ರಲ್ಲಿ ಅಸ್ತಿತ್ವಕ್ಕೆ ಬಂದ ಶರಾವತಿ ವನ್ಯಜೀವಿ ಅಭಯಾರಣ್ಯವು 43,123 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದು ಈಗ ಹೆಚ್ಚುವರು ಪ್ರದೇಶ ಸೇರಿಸಲ್ಪಟ್ಟು ಹೊರಡಿಸಿದ ಅಧಿಸೂಚನೆಯಲ್ಲಿ ಜಿಲ್ಲೆಯ ಅಘನಾಶಿನಿ ಸಂರಕ್ಷಣಾ ಮೀಸಲು ಪ್ರದೇಶ 29,893 ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿಯಾಗಿ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಸುಮಾರು 20,000 ಹೆಕ್ಟೇರ್ ಪ್ರದೇಶ ಮೀಸಲು ಅರಣ್ಯವನ್ನು ಶರಾವತಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ತರಲಾಗಿದೆ. ಹೊಸ ಅಧಿಸೂಚನೆಯಂತೆ ಶರಾವತಿ ಅಭಯಾರಣ್ಯ ಒಟ್ಟು 93,016 ಹೆಕ್ಟೇರ್ ಪ್ರದೇಶ ಹೊಂದುತ್ತದೆ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಯುವ ಪ್ರಮುಖರಾದ ಪ್ರವೀಣ ಗೌಡ, ಬಾಬು ಯಂಕಾ ಮರಾಠಿ, ರಾಜು ನಾಯ್ಕ, ಎಂ.ಎನ್. ಹೆಗಡೆ, ಬಾಬು ಮರಾಠಿ, ಸರೋಜಿನಿ ಭಟ್ಟ, ಸಂತೋಷ ಗೌಡ, ಕೃಷ್ಣ ಮರಾಠಿ ಮುಂತಾದವರು ಪಾಲ್ಗೊಂಡಿದ್ದರು.