ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ನಡೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಮಾತನಾಡಿ, ಹಿಂದಿನ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸೌಲಭ್ಯ ಹಾಗೂ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವಿಧಾನಸಭೆ ಚುನಾವಣೆ ನಡೆದು ಆರು ತಿಂಗಳಲ್ಲಿಯೇ ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಲಿಂಗಾಯತ ಧರ್ಮದ ನಿಲುವಿನಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಹೇಳಿರುವ ಸಚಿವ ಡಿ.ಕೆ. ಶಿವಕುಮಾರ ಹೇಳಿಕೆ ಮೂರ್ಖತನದ ಪರಮಾವಧಿ ಹಾಗೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿದ್ದರಿಂದಲೇ ರಾಜ್ಯದ ಲಿಂಗಾಯತರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿದೆ. ಆದರೂ, ಸಚಿವ ಡಿ.ಕೆ. ಶಿವಕುಮಾರ ಅವರು ಒಕ್ಕಲಿಗರ ಪ್ರದೇಶದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಸಮಯ ಸಾಧಕರಿಂದಲೇ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಟೀಕಿಸಿದರು.
ಸಚಿವ ಡಿಕೆಶಿ ಈಗಾಗಲೇ ಅನೇಕ ಹಗರಣಗಳಲ್ಲಿ ಸಿಲುಕಿದ್ದಾರೆ. ಲಿಂಗಾಯತ ಧರ್ಮಕ್ಕೆ ಸಂಬಂಧವಿರದ ವಿಷಯದ ಬಗ್ಗೆ ಅವರು ಹೇಳಿಕೆ ನೀಡಿರುವುದು ಖಂಡನೀಯ. ಅಸಂಬದ್ಧ ಹೇಳಿಕೆ ನೀಡಿರುವ ಸಚಿವ ಡಿಕೆಶಿ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಎಐಸಿಸಿಐ ಅಧ್ಯಕ್ಷ
ರಾಹುಲ್‌ಗಾಂಧಿ ಹಾಗೂ ರಾಜ್ಯಾಧ್ಯಕ್ಷ ದಿನೇಶ ಗುಂಡುರಾವ್ ಅವರನ್ನು ಒತ್ತಾಯಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಸೋಮಣ್ಣ ನಡಕಟ್ಟಿ, ಅಯ್ಯಣ್ಣಗೌಡ ಪಾಟೀಲ, ಕುಪೇಂದ್ರ ಪಾಟೀಲ, ಶಿವಶರಣ ದೇಗಾಂವ, ಜಗದೀಶ ಪಾಟೀಲ, ಶರಣಪ್ಪ ನಿರಗುಡಿ, ಸಿದ್ರಾಮ ಯಳವಂತಗಿ, ಮಹಾಂತೇಶ ಕಲಬುರಗಿ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ್ ಹಾಗೂ ಇತರರಿದ್ದರು.