ರಾಮನಗರ: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ 15 ತಿಂಗಳಿಂದ ಉಳಿಸಿಕೊಂಡಿರುವ ಎಂಸಿಟಿಎಸ್ ಪ್ರೋತ್ಸಾಹ ಧನ ಪಾವತಿಯಾದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ. ಅಲ್ಲಿಯವರೆಗೂ ಅನಿರ್ಧಿಷ್ಟ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ ರಾಜ್ಯ ಘಟಕದ ಉಪಾಧ್ಯಕ್ಷೆ ಟಿ.ಸಿ.ರಮಾ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಎದುರು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗೌರವಧನ ಹೆಚ್ಚಿಸಿ: ನೆರೆಯ ಆಂಧ್ರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ 10 ಸಾವಿರ ಗೌರವ ಧನ ನಿಗದಿ ಮಾಡಲಾಗಿದೆ. ನಮ್ಮ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ 12 ಸಾವಿರ ಗೌರವಧನವನ್ನು ನಿಗದಿ ಮಾಡಬೇಕು. ಆಶಾ ಸಾಫ್ಟ್ ಅಥವಾ ಆರ್‌ಸಿಪಿಎಚ್ ಪೋರ್ಟ್‌ಲ್‌ಗೆ ಆಶಾ ಪೋತ್ಸಾಹಧನದ ಜೋಡಣೆ ರದ್ದುಪಡಿಸಬೇಕು. ಆಶಾ ಕಾರ್ಯಕರ್ತೆಯು ಪ್ರತಿ ತಿಂಗಳು ಎಂಸಿಟಿಎಸ್ ಸೇವೆಗಳನ್ನು ಮಾಡಿದಷ್ಟು ಹಣ ಸಂಪೂರ್ಣವಾಗಿ ನೀಡಬೇಕು. ಇದಕ್ಕಾಗಿ ಮ್ಯಾನುವಲ್ ವರದಿ ಸಂಗ್ರಹಿಸಿ ವೇತನ ಪಾವತಿ ಮಾಡಬೇಕು ಅಥವಾ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಆಶಾಗೆ ಮಾಸಿಕ ಮೂರು ಸಾವಿರ ನೀಡಬೇಕು. ಜತೆಗೆ ಜನಸಂಖ್ಯೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಹಾಯಧನ ನೀಡಿ: ಆಶಾ ಕಾರ್ಯಕರ್ತೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡ ಬೇಕು. ಹಿಂದಿನಂತೆ ಪ್ರತಿ ವರ್ಷ ನಾಲ್ಕು ಸೀರೆಗಳನ್ನು ನೀಡಬೇಕು. 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತರಬೇಕು. ಆಶಾ ಕಾರ್ಯಕರ್ತೆಯರಿಗೂ ಸಹ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಅಪಘಾತಕ್ಕೆ ಒಳಗಾಗುವ, ಮರಣ ಹೊಂದುವ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ನಿಮ್ಮ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು, ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿದರು. 15 ತಿಂಗಳಿಂದ ಉಳಿಸಿಕೊಂಡಿರುವ ಎಂಸಿಟಿಎಸ್ ಪ್ರೋತ್ಸಾಹಧನ ಪಾವತಿಯಾದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ. ಅಲ್ಲಿಯವರೆಗೂ ಅನಿರ್ಧಿಷ್ಟ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಪ್ರತಿಭಟನಾನಿರತ ಆಶಾಕಾರ್ಯಕರ್ತೆಯರು ಒಕ್ಕೊರಲಿನಿಂದ ಹೇಳಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಗಳಾದ ರೂಪ, ಗೀತ, ಶಿವಲಿಂಗಮ್ಮ, ಸರೋಜ, ವಸಂತ, ಪ್ರೇಮಾ, ಭಾಗ್ಯ, ಆಶಾ, ಎಸ್. ಪವಿತ್ರ, ಎಐ ಯುಟಿಯುಸಿ ಸಂಘಟನೆಯ ಶ್ರೀಕಾಂತ್ ಇದ್ದರು.