ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸದಾಶಿವನಗರದ ಮನೆ ಸೇರಿದಂತೆ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ಮನೆಯೊಳಗೆ ಸಿಬಿಐ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರೆ, ಮನೆಯ ಹೊರಗಡೆ ಡಿಕೆಶಿ ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಾಳಿ ವಿಚಾರ ಬಹಿರಂಗವಾಗುತ್ತಿದ್ದಂತೆ ಸದಾಶಿವ ನಗರ ಮನೆಮುಂದೆ ಡಿಕೆಶಿ ಬೆಂಬಲಿಗರು ಜಮಾಯಿಸಿದ್ದಾರೆ. ಪ್ರತಿ ಗಂಟೆಗೂ ಬೆಂಬಲಿಗರ ಸಂಖ್ಯೆ ಏರಿಕೆಯಾಗುತ್ತಿದೆ.
ಸಿಬಿಐ ಗೋ ಬ್ಯಾಕ್ , ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಿರುವ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಸಂಖ್ಯೆ ಪೊಲೀಸರು ಜಮಾಯಿಸಿದ್ದು, ಡಿಕೆಶಿ ಮನೆ ರಸ್ತೆ ಪ್ರವೇಶಿಸದಂತೆ ನಿಯಂತ್ರಿಸುತ್ತಿದ್ದಾರೆ.
ಸಿಬಿಐ ದಾಳಿ ಖಂಡಿಸಿ ಸದಾಶಿವನಗರದ ಡಿ.ಕೆ.ಶಿವಕುಮಾರ್ ಮನೆ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಮನಗರದ ದೊಡ್ಡಾಲಹಳ್ಳಿರುವ ಡಿಕೆಶಿ ಮನೆಗೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯ ಮುಂಭಾಗದಲ್ಲಿ ಸ್ಥಳೀಯರು ಜಮಾಯಿಸಿದ್ದು, ಸಿಬಿಐ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದು, ಪ್ರತಿಭಟನೆ ನಡೆಸುತ್ತಿದರು.