ಧಾರವಾಡ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ಗೃಹ ಸಚಿವರು ದಬ್ಟಾಳಿಕೆ ನಡೆಸುವುದರ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಜಗದೀಶ ಶೆಟ್ಟರ ನೇತೃತ್ವದಲ್ಲಿ ಬಿಜೆಪಿಯಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಶೆಟ್ಟರ, ರಾಜ್ಯ ಸಮ್ಮಿಶ್ರ ಸರಕಾರದಿಂದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಬಗ್ಗೆ ಮಾತನಾಡಿದವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಸಮ್ಮಿಶ್ರ ಸರಕಾರ ಪತ್ರಕರ್ತರ ಮೇಲೂ ಹಲ್ಲೆ ಮಾಡಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಾಗುವಂತೆ ಮಾಡುತ್ತಿದೆ ಎಂದು ದೂರಿದರು.
ಸಮ್ಮಿಶ್ರ ಸರಕಾರ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ದುಂಡಾವರ್ತನೆ ತೋರುತ್ತಿದ್ದಾರೆ. ಎಂ.ಬಿ.ಪಾಟೀಲ ಗೃಹ ಸಚಿವರಾದ ಬಳಿಕ ತಮ್ಮ ವಿರುದ್ಧ ಮಾತನಾಡಿದವರ ಮೇಲೆ ದೂರು ದಾಖಲಿಸುವುದು, ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಎಲ್ಲ ಮೈತ್ರಿ ಸಚಿವರನ್ನು ಮನೆಗೆ ಕಳುಹಿಸಲು ಜನರು ಸಿದ್ಧರಾಗಿದ್ದಾರೆ. ಆ ಮೇಲೆ ನಿಖೀಲ್ ಎಲ್ಲಿದಿಯಪ್ಪಾ ಎನ್ನುವ ಪ್ರಸಂಗ ಕುಮಾರಸ್ವಾಮಿ ಜತೆಗೆ ಸಿದ್ದರಾಮಯ್ಯ ಸೇರಿದಂತೆ ಉಳಿದವರಿಗೂ ಬರಲಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಅಭಿಮಾನಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳುಹಿಸಲು ಸ್ವತಃ ರಾಜ್ಯ ಗೃಹ ಮಂತ್ರಿಗಳೇ ವಿಶೇಷ ಆಸಕ್ತಿ ವಹಿಸಿದ್ದಾರೆ. ಮಹೇಶ್ ವಿಕ್ರಮ್ ಹೆಗಡೆ, ಶೃತಿ ಬೆಳ್ಳಕ್ಕಿ, ಶಾರದಾ ಡೈಮಂಡ್, ಹೇಮಂತ್‌ಕುಮಾರ್ ಮತ್ತು ಅಜಿತ್ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರವಾದ ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರ ಹಕ್ಕು, ಸ್ವಾತಂತ್ರ್ಯ ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸುವಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಬೇಕು. ರಾಜಕೀಯ ದ್ವೇಷ ಬದಿಗಿಟ್ಟು ಆಡಳಿತ ನಡೆಸಲು ಸರಕಾರಕ್ಕೆ ಸೂಚಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ನಾಗೇಶ ಕಲಬುರ್ಗಿ, ಸಂಜಯ ಕಪಟಕರ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಶಿವಣ್ಣ ಬಡವನವರ, ಪ್ರಕಾಶ ಗೋಡಬೋಲೆ, ಯಲ್ಲಪ್ಪ ಅರವಾಳದ, ಈರಣ್ಣ ಹಪ್ಪಳಿ, ಈರೇಶ ಅಂಚಟಗೇರಿ, ವೀರೇಶ ಸಂಗಳದ, ಮೋಹನ ರಾಮದುರ್ಗ, ಸುಧೀರ ಸರಾಫ್, ಅರವಿಂದ ಏಗನಗೌಡರ, ಶರಣು ಅಂಗಡಿ, ಶಿವಾನಂದ ಮುತ್ತನವರ, ಅನಸೂಯಾ ಹಿರೇಮಠ, ರೂಪಾ ಈರೇಶನವರ ಸೇರಿದಂತೆ ಹಲವರು ಇದ್ದರು.
ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲ ನಾಲಾಯಕ್ ರಾಜಕಾರಣಿ ಆಗಿದ್ದಾರೆ. ಈ ಹಿಂದೆ ಎಂ.ಬಿ.ಪಾಟೀಲ ನೀರಾವರಿ ಸಚಿವರಿದ್ದಾಗ ಸೋನಿಯಾ ಗಾಂಧಿ ಅವರಿಗೆ ಲಿಂಗಾಯತ ಧರ್ಮದ ವಿಚಾರವಾಗಿ ಸಮಾಜ ಒಡೆಯುವ ಪ್ರಯತ್ನದಿಂದ ಬರೆದ ಪತ್ರ ಅಸಲಿಯೋ ಅಥವಾ ನಕಲಿ ಎಂಬುದನ್ನು ಅಂದೇ ತನಿಖೆ ಮಾಡಿ ಖಾತರಿ ಮಾಡಿಕೊಳ್ಳಬೇಕಿತ್ತು. ಆದರೆ, ಯಾಕೆ ತನಿಖೆ ಮಾಡಲಿಲ್ಲ. ಸದ್ಯ ಮತ್ತೆ ಪತ್ರದ ಬಗ್ಗೆ ಚರ್ಚೆ ಆಗುತ್ತಿದ್ದು, ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ತಿಳಿಸಬೇಕು. ಇದಲ್ಲದೇ ಈ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದವರನ್ನು ಬಂಧನ ಮಾಡಲಾಗುತ್ತಿದೆ. ಹೀಗಾಗಿ ಎಂ.ಬಿ.ಪಾಟೀಲ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನಿಡಬೇಕು ಎಂದು ಶೆಟ್ಟರ ಆಗ್ರಹಿಸಿದರು.