Advertisement

ಮೀಸಲಾತಿ ಹೆಚ್ಚಳಕ್ಕೆ ರಾಜಧಾನಿಯಲ್ಲಿ ಪ್ರತಿಭಟನೆ

11:16 PM Jun 25, 2019 | Team Udayavani |

ಬೆಂಗಳೂರು: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯ ಮಂಗಳವಾರ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಿದ ಭಾರೀ ಪ್ರತಿಭಟನೆ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಿತು.

Advertisement

ಕಳೆದ 16 ದಿನಗಳಿಂದ ಹರಿಹರದಿಂದ ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ವಿಧಾನಸೌಧದ ಮುಂಭಾಗ ಜಮಾಯಿಸಿ ಎಸ್‌.ಟಿ. ಸಮುದಾಯಕ್ಕಿರುವ ಮೀಸಲಾತಿಯನ್ನು ಶೇ.3ರಿಂದ 7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಒಮ್ಮೆಲೇ ವಿಧಾನಸೌಧ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫ‌ಲಗೊಳಿಸಿದರು. ಈ ಸಂಧರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನಸೌಧದಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಸ್ಥಳಾಂತರಗೊಂಡ ಪ್ರತಿಭಟನೆ ಕಾವು ತೀವ್ರತೆ ಪಡೆದುಕೊಂಡಿತು. ಮಾಜಿ ಸಂಸದ ಉಗ್ರಪ್ಪ, ಶಾಸಕ ಬಿ.ಶ್ರೀರಾಮುಲು, ರಾಜೂಗೌಡ ಸೇರಿ ಹಲವು ಮಂದಿ ಪರಿಶಿಷ್ಟ ಪಂಗಡದ ಶಾಸಕರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಖುದ್ದು ಪ್ರತಿಭಟನಾಕಾರರ ಮನವೊಲಿಸಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಆದರೆ, ಅದಕ್ಕೆ ಸಮಿತಿ ರಚನೆಯ ಅವಶ್ಯಕತೆಯಿದ್ದು ಮೂರು ತಿಂಗಳ ಕಾಲಾವಕಾಶ ಬೇಕಿದೆ ಎಂದು ಹೇಳಿದರು. ಡಿಸಿಎಂ ಮಾತಿಗೆ ಬಹುತೇಕ ಒಪ್ಪಿದ ಪ್ರತಿಭಟನಾಕಾರರು ಸರ್ಕಾರದ ಭರವಸೆಯನ್ನು ಎರಡು ತಿಂಗಳಿಗೆ ನಿಗದಿ ಪಡಿಸಿ ಪ್ರತಿಭಟನೆ ಹಿಂಪಡೆದರು.

ಶಾಸಕರು ರಾಜೀನಾಮೆ ಕೊಡಬೇಕು!: ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಸನ್ನಾನಂದ ಸ್ವಾಮೀಜಿ, “ರಾಜ್ಯದಲ್ಲಿ ಸುಮಾರು 50 ಲಕ್ಷ ಪರಿಶಿಷ್ಟ ಪಂಗಡದ ಜನರಿದ್ದಾರೆ. ಕೇಂದ್ರ ಸರಕಾರ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಶೇ. 7.5ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೆ, ರಾಜ್ಯ ಸರಕಾರ ಮಾತ್ರ ಶೇ.3 ಮೀಸಲಾತಿ ನೀಡುವ ಮೂಲಕ ಸಮುದಾಯದ ಅಭಿವೃದ್ಧಿ ಕಡೆಗಣಿಸುತ್ತಿದೆ’ ಎಂದು ಆರೋಪಿಸಿದಲ್ಲದೆ, “ನಮ್ಮ ಮೀಸಲಾತಿ ನಮಗೆ ಕೊಡದಿದ್ದರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತದೆ’ ಎಂದು ಗುಡುಗಿದರು.

Advertisement

ಅಷ್ಟೇ ಅಲ್ಲದೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ 17 ಶಾಸಕರಿದ್ದು, ಸುಮಾರು 8 ಮಂದಿ ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ಎಲ್ಲ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೊನೆಯಾಗುತ್ತಾರೆ (ಗೊಟಕ್‌) ಎಂದು ಎಚ್ಚರಿಕೆ ನೀಡಿದರು. ಸಮುದಾಯದ ನಾಯಕರು ರಾಜೀನಾಮೆ ನೀಡಿದರೆ ಕುಮಾರಸ್ವಾಮಿಯೂ ಕೇಳ್ತಾರೆ, ಅವರ ಅಪ್ಪನೂ ಕೇಳ್ತಾರೆ ಎಂದರು.

“ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಾದದಿಂದ ನಾವು ಶಾಸಕರಾಗಿದ್ದೇವೆ. ನಮ್ಮ ಸಮುದಾಯದ ಪರ ಹೋರಾಡಲು ನಾವು ಸಿದ್ಧ. ಸಮುದಾಯದ ಒಳಿತಿಗೆ ಸ್ವಾಮೀಜಿ ಆದೇಶ ನೀಡಿದರೆ ರಾಜೀನಾಮೆ ನೀಡಲು ಕೂಡ ಸಿದ್ಧನಿದ್ದೇನೆ’ ಎಂದು ಶಾಸಕ ಶ್ರೀರಾಮುಲು ತಿಳಿಸಿದರು. ಮಾಜಿ ಸಂಸದ ಉಗ್ರಪ್ಪ ಮಾತನಾಡಿ, “ಮೀಸಲಾತಿ ಭಿಕ್ಷೆಯಲ್ಲ, ಅದು ಸಾಂವಿಧಾನಿಕ ಹಕ್ಕು. ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಮೀಸಲಾತಿ ಸಿಗಬೇಕು. ಉದ್ಯೋಗ, ಶಿಕ್ಷಣದಲ್ಲೂ ಮೀಸಲಾತಿ ಹೆಚ್ಚಿಸಬೇಕು. ನ್ಯಾಯಯುತವಾಗಿ ನಾವು ಹೋರಾಡುತ್ತಿದ್ದೇವೆ’ ಎಂದರು .

ರಾಜೀನಾಮೆ ನೀಡಲು ಸಿದ್ಧ – ಶ್ರೀರಾಮಲು: “ಸಮುದಾಯದ ಒಳಿತಿಗಾಗಿ ಹೋರಾಡಲು ಸದಾ ಬದ್ಧವಾಗಿದ್ದು, ಪ್ರಸನ್ನಾನಂದ ಪುರಿ ಸ್ವಾಮೀಜಿ ಆದೇಶ ನೀಡಿದರೆ ರಾಜೀನಾಮೆ ನೀಡಲು ಸಿದ್ಧ’ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮಲು ಹೇಳಿದರು.

ಪರಿಶಿಷ್ಟ ಪಂಗಡ ಸಮುದಾಯಕ್ಕೆ 7.5 ಮೀಸಲಾತಿ ನೀಡುವ ಬೇಡಿಕೆ ಸಂಬಂಧ ವಾಲ್ಮೀಕಿ ಸಮುದಾಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ನಮ್ಮ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಾದದಿಂದ ನಾವು ಶಾಸಕರಾಗಿದ್ದೇವೆ. ಅಧಿಕಾರ ಶಾಶ್ವತವಲ್ಲ. ನಮ್ಮವರ ಅಭಿವೃದ್ಧಿ ಮುಖ್ಯ. ನಮ್ಮ ಸಮುದಾಯದ ಪರ ಹೋರಾಡಲು ನಾವು ಸಿದ್ಧವಾಗಿರುತ್ತೇವೆ. ಸಮುದಾಯದ ಒಳಿತಿಗೆ ಸ್ವಾಮೀಜಿ ಆದೇಶ ನೀಡಿದರೆ ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ’ ಎಂದರು.

ವಾಲ್ಮೀಕಿ ಸಮುದಾಯ ಶ್ರಮಜೀವನ ನಡೆಸುತ್ತದೆ. ಶಕ್ತಿ ಹಾಗೂ ಯುಕ್ತಿಯಲ್ಲಿ ಮುಂದಿದ್ದೇವೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನಮಗೆ ಸಿಗಬೇಕಿದೆ. ಮೀಸಲಾತಿ ನಮ್ಮ ಹಕ್ಕು, ಹೀಗಾಗಿ ನ್ಯಾಯಯುತವಾಗಿ ನಮಗೆ ಸಲ್ಲಬೇಕಿರುವ ಮೀಸಲಾತಿ ಕೇಳುತ್ತಿದ್ದೇವೆ ಭಿಕ್ಷೆ ಬೇಡುತ್ತಿಲ್ಲ ಎಂದು ಹೇಳಿದರು. ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಬೇಕು, ಸಮುದಾಯ ಒಂದಾಗಿ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂದರು.

ಮುಖ್ಯಮಂತ್ರಿ ಸಭೆ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಪರಿಶಿಷ್ಟ ಪಂಗಡದ ಸಚಿವರು ಹಾಗೂ ಶಾಸಕರ ಜತೆ ಎಸ್‌ಟಿ ಮೀಸಲಾತಿ ಕುರಿತು ಚರ್ಚಿಸಿದರು. ಮೀಸಲಾತಿ ಸಂಬಂಧ ಸರ್ಕಾರವು ಗಂಭೀರವಾಗಿ ಚಿಂತಿಸುತ್ತಿದೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೂ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಸತೀಶ್‌ ಜಾರಕಿಹೊಳಿ, ಈ. ತುಕಾರಾಂ ಮುಖಂಡರಾದ ವಿ.ಎಸ್‌.ಉಗ್ರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next