ಬೆಳ್ತಂಗಡಿ: ಕುವೆಟ್ಟು ಗ್ರಾಮದ ಬದ್ಯಾರು ನಿವಾಸಿ ರಾಮನಾಯ್ಕ ಅವರ ಮೇಲೆ ಅರಣ್ಯ ಸಂಚಾರಿ ದಳದ ವಲಯ ಅರಣ್ಯಧಿಕಾರಿ ಸಂಧ್ಯಾ ಸುಳ್ಳು ಆರೋಪಗಳನ್ನು ಹೊರಿಸಿ, ಸುಮಾರು 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು, ಖಾಲಿ ಪತ್ರಕ್ಕೆ ಸಹಿ ಹಾಕಿಸಿ ಕಿರುಕುಳ ನೀಡಿದ್ದರಿಂದ ಖಿನ್ನತೆಗೆ ಒಳಗಾಗಿ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದ್ದರಿಂದ ಘಟನೆಗೆ ಕಾರಣರಾದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬೆಳ್ತಂಗಡಿ ಠಾಣೆಯ ಮುಂಭಾಗ ಮನೆಮಂದಿ ಬುಧವಾರ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು. ಆ ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.
ಪ್ರಕರಣ ಕುರಿತು ಮೃತರ ಪುತ್ರಿ ಅಕ್ಷತಾ ದೂರು ನೀಡಿದ್ದು, ತನ್ನ ತಂದೆಯ ಸಾವಿಗೆ ಕಾರಣರಾದ ಸ್ಕ್ವಾಡ್ ಅಧಿಕಾರಿ ಸಂಧ್ಯಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕುವೆಟ್ಟು ಗ್ರಾಮದಲ್ಲಿ ರಾಮ ನಾಯ್ಕಗೆ ಸೇರಿದ 2 ಎಕ್ರೆ ಜಾಗವಿದ್ದು, 60 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಕೃಷಿಯ ಜತೆ ಇತರೆ ಮರಗಳನ್ನು ನೆಟ್ಟು ಬೆಳೆಸಿದ್ದರು. 4-5 ವರ್ಷಗಳಿಂದ ಸ್ಥಳದಲ್ಲಿದ್ದ ಕಾಡು ಜಾತಿಯ ಮರಗಳನ್ನು ತೆರವುಗೊಳಿಸಿ, ಅಲ್ಲಿಯೇ ದಾಸ್ತಾನು ಮಾಡಿ ಇಡಲಾಗಿತ್ತು. ಬಳಿಕ ಅಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿತ್ತು. 2022ರ ಜನವರಿ 4ರಂದು ಮಂಗಳೂರಿನ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಸಂಧ್ಯಾ ಹಾಗೂ ಇತರ ನಾಲ್ಕು ಅಧಿಕಾರಿಗಳು ತಂದೆಯ ಬಳಿ ಮಾತನಾಡಿದ್ದಾರೆ. ದಾಸ್ತಾನು ಇಟ್ಟ ಮರಗಳನ್ನು ಮರಗಳ್ಳರ ಜತೆ ಸೇರಿ ಮಾರಾಟ ಮಾಡುತ್ತಿರುವಂತೆ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು, ಆದರೆ ಇದಕ್ಕೆ ತಂದೆ ಒಪ್ಪಿರಲಿಲ್ಲ. ಅದಕ್ಕೆ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದು, ಖಾಲಿ ಹಾಳೆಯಲ್ಲಿ ಸಹಿ ಪಡೆದಿದ್ದಾರೆ. ಪ್ರಕರಣವನ್ನು ಮುಗಿಸಲು 10 ಲಕ್ಷ ರೂ. ಹಣ ನೀಡಬೇಕೆಂದು ಬೆದರಿಸಿ ಹೋಗಿದ್ದಾರೆ ಎಂದು ಪುತ್ರಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಬೇಕು
ಈ ಘಟನೆಯಿಂದ ಮನನೊಂದಿದ್ದ ತಮ್ಮ ತಂದೆ, ಅಂದಿನಿಂದ ಸರಿಯಾಗಿ ಆಹಾರ ಸೇವಿಸದೆ ಹಾಸಿಗೆ ಹಿಡಿದು ಹೃದಯಾಘಾತಕ್ಕೊಳಗಾಗಿದ್ದಾರೆ. ಅಧಿಕಾರಿ ಸಂಧ್ಯಾ ಬೆದರಿಕೆ ಒಡ್ಡಿದ್ದರಿಂದ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಅಸುನೀಗಿರುತ್ತಾರೆ. ಆದ್ದರಿಂದ ಸಂಧ್ಯಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಹಾಗೂ ತಂದೆಯ ಸಾವಿಗೆ ಕಾರಣರಾದ ಅವರನ್ನು ಕೂಡಲೇ ವಜಾಗೊಳಿಸಿ, ಅವರಿಂದಲೇ ತಮ್ಮ ಕುಟುಂಬಕ್ಕೆ ಜೀವನಾಂಶ ಒದಗಿಸುವ ವ್ಯವಸ್ಥೆ ಮಾಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಘಟನೆ ಕುರಿತು ರಾಮನಾಯ್ಕ ಅವರ ಪುತ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಂಧ್ಯಾ ಅವರು ಮನೆಗೆ ಆಗಮಿಸಿ ಕಿರುಕುಳ ನೀಡಿದ ಬಳಿಕ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಘಟನೆಗೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ, ತಾ.ಪಂ ಮಾಜಿ ಸದಸ್ಯ ಶಶಿಧರ ಕಲ್ಮಂಜ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ, ಬಿಜೆಪಿ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿ.ಪಂ. ಮಾಜಿ ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಕೊರಗಪ್ಪ ಗೌಡ, ಪ್ರಮುಖರಾದ ಜಯಂತಿ ಪಾಲೆದು, ಕೃಷ್ಣಯ್ಯ ಆಚಾರ್ಯ, ಅಮಿತಾ, ಗಣೇಶ್ ಗೌಡ, ಪ್ರಮೋದ್ ದಿಡುಪೆ, ಮಹಾಬಲ ಗೌಡ ಬಂದಾರು, ವಿಠಲ ಆಚಾರ್ಯ ಕುವೆಟ್ಟು, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಯಾನಂದ ಕಲ್ಲಾಪು, ಜಯಂತ್ ಗೌಡ ಗುರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.