ಬ್ಯಾಡಗಿ: ಬೆಳೆ ವಿಮೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಗಣಿ ಎಸೆದವರೇ ಇಂದು ಸಚಿವ, ಸಂಸದ ಹಾಗೂ ಶಾಸಕರಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯ ರೈತರಿಗೆ ನಾಲ್ಕು ವರ್ಷಗಳಿಂದ ವಿಮೆ ಪರಿಹಾರ ದೊರೆತಿಲ್ಲ ಹೀಗಾಗಿ ಜ.13 ರಂದುತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಅನಿವಾರ್ಯ ಎಂದು ರೈತ ಮುಖಂಡ ಗಂಗಣ್ಣ ಎಲಿ ಹೇಳಿದರು.
ಪಟ್ಟಣದ ವಿಎಸ್‌ಎಸ್ ಬ್ಯಾಂಕ್‌ನಲ್ಲಿ ನಡೆದ ರೈತ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಬೆಳೆ ವಿಮೆ ಎಂಬುದು ಜಿಲ್ಲೆಯ ರೈತರ ಪಾಲಿಗೆ ಗಗನ ಕುಸುಮವಾಗುತ್ತ ಸಾಗಿದೆ. ಕಳೆದ ವರ್ಷ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂಬ ಹಣೆಪಟ್ಟಿ ಹಚ್ಚಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಸಗಣಿ ಎಸೆದು ವಿಮೆ ಬಿಡುಗಡೆ ಮಾಡಿಸುವಂತೆ ನಟಿಸಿದ್ದ ಜಿಲ್ಲೆಯ ನಟ ಭಯಂಕರ ರಾಜಕಾರಣಿಗಳೇ ಇಂದು ರಾಜ್ಯದ ಮಂತ್ರಿಗಳಾಗಿದ್ದಾರೆ. ಆದರೂ, ವಿಮೆ ಹಣ ರೈತ ಖಾತೆಗೆ ಜಮೆ ಆಗದಿರುವುದು ರಾಜಕಾರಣಿಗಳು ನಂಬಲರ್ಹರೇ ಎಂಬ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿದೆ ಎಂದು ಆರೋಪಿಸಿದರು.
ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರ ಮಾತನಾಡಿ, ತಾಲೂಕಿನ ಕೃಷಿ ಇಲಾಖೆಯಲ್ಲಿ ರೈತರಿಗೆ ಯಾವ ರೀತಿಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಬೀಜ, ಗೊಬ್ಬರ, ಕ್ರಿಮಿನಾಶಕದ ಕೊರತೆ ತಾಲೂಕಿನ ರೈತರನ್ನು ಕಾಡುತ್ತಿದೆ. ಅಲ್ಲದೇ ವಿಮೆ ಹಣಕ್ಕಾಗಿ ರೈತರಿಗೆ ಅಲೆದಾಡಿ ಸಾಕಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಬೃಹತ್ ಹೋರಾಟ ನಡೆಸಲಾಗುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನ ರೈತರ ಪಾಲಿಗೆ ತಾಲೂಕಾಡಳಿತ ಇದ್ದೂ ಇಲ್ಲದಂತಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು, ದುಡ್ಡು ಕೊಡದಿದ್ದರೆ ಯಾವ ಕೆಲಸವೂ ಆಗದ ಸ್ಥಿತಿಗೆ ಬಂದು ತಲುಪಿದೆ. ಇದರಿಂದ ರೈತರು, ಸಾರ್ವಜನಿಕರು, ಹೈರಾಣಾಗಿದ್ದು, ಬಡವರು ಕೂಲಿ ಕಾರ್ಮಿಕರು, ವೃದ್ಧರು ತಮ್ಮ ಅಳಲನ್ನು ಯಾರ ಬಳಿಯೂ ತೋಡಿಕೊಳ್ಳದಂತಾಗಿದೆ. ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುವಲ್ಲಿತಾಲೂಕಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಮಲ್ಲೇಶಪ್ಪ ಡಂಬಳ, ಕೆವಿ ದೊಡ್ಡಗೌಡ್ರ, ಮಂಜು ತೋಟದ, ಚನ್ನಬಸಪ್ಪ ಕೋಡಿಹಳ್ಳಿ, ಲಕ್ಷ್ಮಣ ಅಮಾತಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.