Advertisement

ಪೊಲೀಸ್‌ ಆಯುಕ್ತರ ಕಚೇರಿ ಎದುರು ಪ್ರತಿಭಟನೆ

04:40 PM Aug 18, 2020 | Suhan S |

ಕಲಬುರಗಿ: ಅಕ್ರಮ ಗೋ ಸಾಗಾಟ ಪ್ರಕರಣಗಳ ಹಾಗೂ ಮತ್ತಿತರ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿರುವ ಪೊಲೀಸ್‌ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪೊಲೀಸ್‌ ಆಯುಕ್ತರ ಕಚೇರಿ ಮುಂಭಾಗದ ರಸ್ತೆಯಲ್ಲಿ ಕೆಲ ಹೊತ್ತು ಧರಣಿ ಕುಳಿತ ಶ್ರೀರಾಮಸೇನೆ, ಗೋ ರಕ್ಷಣಾ ಹಾಗೂ ವಿವಿಧ ಸಂಘಟನೆಗಳ ಸಮಿತಿಯ ಕಾರ್ಯಕರ್ತರು ಪೊಲೀಸರ ನಿರ್ಲಕ್ಷತನದ ವಿರುದ್ಧ ಆಕ್ರೋಶ ಹೊರ ಹಾಕಿದರು. ಈಚೆಗೆ ಅಕ್ರಮವಾಗಿ ಎಂಟು ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ತಡೆದು ಸ್ಟೇಶನ್‌ ಬಜಾರ್‌ ಠಾಣೆಗೆ ಒಪ್ಪಿಸಲಾಗಿತ್ತು. ಆದರೂ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಲಾಲಸಾಬ್‌ ಗೌಂಡಿ ಅವರು ವಾಹನ ಹಾಗೂ ದನಗಳನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಕೆಲ ತಿಂಗಳ ಹಿಂದೆ ಜಿಲ್ಲಾಮಟ್ಟದ ಸಭೆ ನಡೆಸುತ್ತಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರನ್ನೇ ರೈತ ಮುಖಂಡ ಮಾರುತಿ ಮಾನ್ಪಡೆ ನಿಂದಿಸಿದ್ದಾರೆ. ಈ ಬಗ್ಗೆಯೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಈ ಹಿಂದೆ ಸಿಎಎ ವಿರೋಧ ಪ್ರತಿಭಟನೆ ವೇಳೆ ಕೆಲ ಅಹಿತಕರ ಘಟನೆ ನಡೆದಿದ್ದು, ಪ್ರಕರಣಗಳಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ್‌ ಹಾಗೂ ಉಪ ಆಯುಕ್ತ ಡಿ. ಕಿಶೋರಬಾಬು ಅವರು ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿದರು. ಎಸಿಪಿ ವಿ.ಎಚ್‌. ವಿಜಯಕುಮಾರ ಅವರಿಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಆಯುಕ್ತರು ಎಂದು ಭರವಸೆ ನೀಡಿದರು.

ಇದರಿಂದ ಪ್ರತಿಭಟನೆ ಹಿಂಪಡೆಯಲಾಯಿತು. ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಬಿಜೆಪಿ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಹಲವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next