ಅಂಕೋಲಾ: ಪುರಸಭೆಯಲ್ಲಿ ಇ-ಸ್ವತ್ತಿಗಾಗಿ ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕರನ್ನು ಸತಾಯಿಸುತ್ತಿರುವುದನ್ನು ಖಂಡಿಸಿ ಪುರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ, ಇಲ್ಲಿಯ ಪುರಸಭೆಯಲ್ಲಿ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಸಿದರೆ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಸಾರ್ವಜನಿಕರು ನೀಡಿದ ಕಡತವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸದೆ ತಮ್ಮ ಬಳಿಯೆ ಇಟ್ಟುಕೊಂಡು ಇಲ್ಲದ ಕಾರಣಗಳನ್ನು ನೀಡಿ ಪ್ರಕರಣಕ್ಕೆ ಹಿಂಬರಹ ನೀಡದೆ ಸಾರ್ವಜನಿಕರಿಗೆ ಅಲೆದಾಡಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಅರ್ಬನ್ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ್ ಮಾತನಾಡಿ ಅಂಕೋಲಾದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಸರಾಗವಾಗಿ ಪರವಾನಿಗೆ ಸಿಗುತ್ತಿದೆ. ಆದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ಇ-ಸ್ವತ್ತು ದೊರಕುತ್ತಿಲ್ಲದಿರುವ ಒಳಗಿನ ಮರ್ಮ ಏನು ಎಂದು ಅರ್ಥವಾಗುತ್ತಿಲ್ಲ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಯೋಜನೆ ಇಲಾಖೆ ಕಾರ್ಯಗತಗೊಳಿಸಬೇಕು ಎನ್ನುತ್ತಾರೆ. ಯೋಜನಾ ಇಲಾಖೆಯವರನ್ನು ಕೇಳಿದರೆ ಪುರಸಭೆಗೆ ಅಧಿಕಾರ ಇದೆ ಎನ್ನುತ್ತಾರೆ. ಹೀಗಾಗಿ ಇಲಾಖೆ ಧೋರಣೆಗೆ ಬೇಸತ್ತು ಹೋಗುವಂತಾಗಿದೆ ಎಂದರು.
ನ್ಯಾಯವಾದಿ ನಾಗಾನಂದ ಬಂಟ ಮಾತನಾಡಿ 2 ವರ್ಷಗಳ ಹಿಂದೆ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದಾಗ ಕೈ ಬರಹದ ನಮೂನೆ -3 ನೀಡುತ್ತಿದ್ದರು. ಆದರೆ ಇತ್ತೀಚಿಗೆ ಯಾವುದೇ ಇ-ಸ್ವತ್ತು ನೀಡದೆ ತೊಂದರೆ ಕೊಡುತ್ತಿದ್ದಾರೆ. ಎಲ್ಲ ದಾಖಲೆಗಳನ್ನು ನೀಡಿದಾಗಲೂ ಇಲ್ಲಿನ ಅಧಿಕಾರಿಗಳು ಇ-ಸ್ವತ್ತು ನೀಡದೇ ಅರ್ಜಿ ತಿರಸ್ಕರಿಸಿ ಅವ್ಯವಹಾರಕ್ಕೆ ಆಸ್ಪದ ನೀಡಲಾಗುತ್ತಿದೆ ಎಂದರು.
ಪ್ರತಿಭಟನಾಕಾರರು ಶಿರೆಸ್ತೇದಾರ ಎಂ.ಬಿ. ಗುನಗಾ ಮತ್ತು ಮುಖ್ಯಾಧಿಕಾರಿ ಪ್ರಹ್ಲಾದ ಅವರಿಗೆ ಮನವಿ ಅರ್ಪಿಸಿದರು. ಪಪಂ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಪುರಸಭೆ ಸದಸ್ಯರಾದ ಜಗದೀಶ ನಾಯಕ, ಮಂಜುನಾಥ ನಾಯ್ಕ, ನಾಗರಾಜ್ ಐಗಳ, ನ್ಯಾಯವಾದಿ ಬೈರವ ನಾಯ್ಕ, ರಾಘು ನಾಯ್ಕ, ನವಾಜ್ ಶೇಖ್, ಸಂಜಯ ಭಾವಿಕೇರಿ, ಚಂದ್ರಕಾಂತ ನಾಯ್ಕ, ಪ್ರವೀಣ ನಾಯ್ಕ, ಗೋವಿಂದ್ರಾಯ ನಾಯ್ಕ, ಪ್ರಶಾಂತ ನಾಯಕ, ನಾಗೇಂದ್ರ ನಾಯ್ಕ, ನಾಗೇಶ ನಾಯ್ಕ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗಜಾನನ ನಾಯ್ಕ, ಶಶಿಕಾಂತ ಶೆಟ್ಟಿ, ಉಪಸ್ಥಿತರಿದ್ದರು.