ರಾಯಚೂರು: ಬಡ್ತಿ ವಿಚಾರದಲ್ಲಿ ನೌಕರಿಗಾಗುತ್ತಿರುವಅನ್ಯಾಯ ಸರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಜೆಸ್ಕಾಂ ನೌಕರರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದರೂ ಸಂಬಂಧಪಟ್ಟವರು ಅವುಗಳ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ. ಕುಂದು ಕೊರತೆ ಸಭೆ ನಡೆಸಿ ಸಮಸ್ಯೆಗಳ ಬಗೆಹರಿಸುವಂತೆ ಮನವಿ ಸಲ್ಲಿಸಬೇಕು. ಅರ್ಹ ನೌಕರರನ್ನು ಕೈಬಿಟ್ಟು ಮಾಪನ ಓದುಗ ಹುದ್ದೆ ಅಧಿಕಾರಿಗಳಿಗೆ ಕಿರಿಯ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಇದರಿಂದ ಪ್ರಾಮಾಣಿಕ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಐಟಿಐ ವಿದ್ಯಾರ್ಹತೆ ಇರುವ ನೌಕಕರರು ಶೇ.20 ಹಾಗೂ ಶೇ.30 ಕೋಟಾದಲ್ಲಿ ಪರಿಗಣಿಸಬೇಕು ಎಂದು ಸ್ಪಷ್ಟ ಆದೇಶವಿದ್ದರೂ ಕೇವಲ ಶೇ.20 ಕೋಟಾದಡಿ ಮಾತ್ರ ಪರಿಗಣಿಸಲಾಗುತ್ತಿದೆ. ಇದರಿಂದ ಶೇ.30ರಲ್ಲಿ ಅವಕಾಶವಿದ್ದರೂ ಬಡ್ತಿ ಸಿಗದೆ ಸಾಕಷ್ಟು ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಆಪರೇಟರ್ ಉಗ್ರಾಣ ಪಾಲಕ ಹುದ್ದೆಗಳಿಗೆ ಈಗಾಗಲೇ ನೀಡಿದ ಬಡ್ತಿಯಲ್ಲಿ ಐಟಿಐ ನೌಕರರನ್ನು ಶೇ.20ರ ಕೋಟಾದಲ್ಲಿ ಪರಿಗಣಿಸಿ ಬಡ್ತಿ ನೀಡಬೇಕಿದೆ. 1998ರಲ್ಲಿ ಮೀಟರ್ ರಿಫ್ರೇಶಮೆಂಟ್ ಗ್ಯಾಂಗ್ ಮ್ಯಾನ್ ಹುದ್ದೆಗೆ ಐಟಿಐ ವಿದ್ಯಾರ್ಹತೆ ಮೇಲೆ ನೇಮಕಾತಿಯಾದ ನೌಕರರನ್ನು ವೃತ್ತ ಜೇಷ್ಠತಾ ಪಟ್ಟಿಯಲ್ಲಿ ಶೇ.20 ಕೋಟಾದಲ್ಲಿ ಪರಿಗಣಿಸಲಾಗಿದೆ ಎಂದರು.
ಶೇ.20ರಷ್ಟು ಹಾಗೂ ಶೇ.30ರಷ್ಟು ಇರುವ ಎರಡು ಕೋಟಾದಲ್ಲಿ ನೌಕರರನ್ನು ಪರಿಗಣಿಸಿ ಜೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ ನೀಡಬೇಕು, ಒಂದು ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಬಗೆಹರಿಸದಿದ್ದಲ್ಲಿ ಮೌನ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯದರ್ಶಿ ಜೆ.ಎಲ್. ಗೋಪಿ, ವೆಂಕಟೇಶ, ಬಸವರಾಜ ಇದ್ದರು.