ಸೇಡಂ: ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಕರುಳ ಕುಡಿ ಮೃತಪಟ್ಟಿದೆ ಎಂದು ಆರೋಪಿಸಿ ಪಾಲಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ಸೋಮವಾರ ಜರುಗಿದೆ.
ಚೇಳು ಕಡಿದ ರಂಜೋಳ ಗ್ರಾಮದ ಐಶ್ವರ್ಯ ಮಲ್ಲಪ್ಪ (11)ಗೆ ತುರ್ತು ಚಿಕಿತ್ಸೆ ನೀಡದೇ ತಾರತಮ್ಯ ಎಸಗಿದ ಪರಿಣಾಮ ಚೇಳಿನ ವಿಷ ಮೈತುಂಬಾ ಹರಡಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪಾಲಕರು ಆರೋಪಿಸಿದರು. ಸರಿಯಾದ ಸಮಯಕ್ಕೆ ವಿಷ ನಿರೋಧಕ ಮದ್ದು ನೀಡಿಲ್ಲ. ಅಲ್ಲದೇ ಆಂಬ್ಯುಲೆನ್ಸ್ ಇದ್ದರೂ ಜಿಲ್ಲಾಸ್ಪತ್ರೆಗೆ ಕಳುಹಿಸುವಲ್ಲಿ ವಿಳಂಬ ತೋರಿದ್ದಾರೆ. ಬಾಲಕಿಯನ್ನು ಕರೆ ತಂದಾಗ ವೈದ್ಯರು ನಿರ್ಲಕ್ಷ್ಯ ತೋರಿರುವುದರಿಂದಲೇ ಮಗು ಮೃತಪಟ್ಟಿದೆ ಎಂದು ಗ್ರಾಮಸ್ಥರು ದೂರಿದರು.
ಪಟ್ಟಣದ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಜನರ ಮನವೊಲಿಸಲು ಪಿಎಸ್‌ಐ ಸುಶೀಲಕುಮಾರ ಯತ್ನಿಸಿದರೂ ಜಗ್ಗದ ಪಾಲಕರು ಮಗುವಿನ ಶವ ತರಿಸಿ ಆಸ್ಪತ್ರೆ ಎದುರಿಗಿಟ್ಟು ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಪೊಲೀಸರ ಜತೆ ವಾಗ್ವಾದ ನಡೆಸಿ, ನಿರ್ಲಕ್ಷ್ಯ ತೋರಿದ ವೈದ್ಯರ ಅಮಾನತು ಮಾಡುವಂತೆ ಆಗ್ರಹಿಸಿದರು. ನಂತರ ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ|ಗೀತಾ ಪಾಟೀಲ ಅವರು ನಿರ್ಲಕ್ಷ್ಯ ತೋರಿದ ವೈದ್ಯರ ಅಮಾನತಿಗೆ ಕೋರಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ನಂತರವೇ ಪ್ರತಿಭಟನೆ ಕೈಬಿಡಲಾಯಿತು.
ಏನಿದು ಘಟನೆ? : ಸೇಡಂ ತಾಲೂಕಿನ ರಂಜೋಳ ಗ್ರಾಮದ ಮಲ್ಲಪ್ಪ ಎಂಬುವರು ತಮ್ಮ 11 ವರ್ಷದ ಮಗಳು ಐಶ್ವರ್ಯಳಿಗೆ ಚೇಳು ಕಡಿದ ಪರಿಣಾಮ ಫೆ.29ರಂದು ರಾತ್ರಿ ಸೇಡಂ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಸರಿಯಾದ ಚಿಕಿತ್ಸೆ ದೊರೆಯದ ಪರಿಣಾಮ ವೈದ್ಯರು ಕಲಬುರಗಿಗೆ ತೆರಳುವಂತೆ ಸೂಚಿಸಿದ್ದರು. ನಂತರ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಳು. ಜಿಲ್ಲಾಸ್ಪತ್ರೆಗೆ ಕಳುಹಿಸುವ ಮುನ್ನ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ, ಆಂಬ್ಯುಲೆನ್ಸ್ ಸಹ ಒದಗಿಸಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.