ರಾಮನಗರ: ಕೋವಿಡ್ ಸೋಂಕು ನೆಗೆಟಿವ್ ಇದ್ದರೂ, ಪಾಸಿಟಿವ್ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿ ಮೃತ ಮಹಿಳೆಯ ಸಂಬಂಧಿಕರು ಜಿಲ್ಲಾ ಕಚೇರಿಗಳ ಸಂಕಿರ್ಣದ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೈಲಾಂಚ ಹೋಬಳಿಯ ಅಂಜನಾಪುರ ಗ್ರಾಮದ ನಿವಾಸಿ ಹೊನ್ನಮ್ಮ ಎಂಬುವರು ಸೆ.24ರಂದು ರಾಜರಾಜೇಶ್ವರಿಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೋವಿಡ್ ಸೋಂಕು ಇಲ್ಲದಿದ್ದರೂ, ಸೋಂಕು ಇದೆ ಎಂದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ರೋಗಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿದ್ದಾರೆ.
ಶವ ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ಶವ ಗ್ರಾಮಕ್ಕೆ ಸಾಗಿಸಿದ ನಂತರ ಪ್ರತಿಭಟನೆಗೆ ಅವಕಾಶ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮೃತ ಮಹಿಳೆಯ ಪುತ್ರ ಎಚ್.ಸುರೇಶ್, ಸೆ.17ರಂದು ತಮ್ಮ ತಾಯಿಗೆ ಕಫ, ಕೆಮ್ಮು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಲಾಗಿತ್ತು. ಕೋವಿಡ್ ಸೋಂಕು ಇದೆ ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ತಿಳಿಸಿ, ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದರು.
ಸೋಂಕಿನ ಕುರಿತು ಮೊಬೈಲ್‌ಗೆ ಸಂದೇಶ ಬರದಿದ್ದಾಗ ಜಿಲ್ಲಾಸ್ಪತ್ರೆಯಲ್ಲಿ ಒತ್ತಾಯ ಮಾಡಿ ವಿಚಾರಿಸಿದಾಗ ಕೋವಿಡ್ ನೆಗೆಟಿವ್ ಎಂಬ ಮಾಹಿತಿ ಸೆ.23ರಂದು ಗೊತ್ತಾಗಿದೆ. ಸೆ.24ಕ್ಕೆ ನಮ್ಮ ತಾಯಿ ತೀರಿಕೊಂಡಿದ್ದಾರೆ ಎಂದು ಖಾಸಗಿ ಆಸ್ಪತ್ರೆ ತಿಳಿಸಿದೆ. ಈ ವೇಳೆ ನಡೆಸಿದ ಪರೀಕ್ಷೆಯಲ್ಲೂ ಅವರಿಗೆ ನೆಗೆಟಿವ್ ಬಂದಿದೆ. ಆದರೂ ಅವರನ್ನು ಕೋವಿಡ್ ವಾರ್ಡಿನಲ್ಲೇ ಇರಿಸಲಾಗಿತ್ತು. ಕೋವಿಡ್ ಸೋಂಕಿತೆ ಎಂಬಂತೆ ಅವರ ಶವವನ್ನು ವಿಶೇಷವಾಗಿ ಸುತ್ತಿ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕನ್ನಡ ಜನಮನ ವೇದಿಕೆ ಅಧ್ಯಕ್ಷ ರಾಜು ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಶಾಮೀಲಾಗಿ ಕೋವಿಡ್‌ಇಲ್ಲದವರಿಗೂಪಾಸಿಟಿವ್ ವರದಿ ಕೊಟ್ಟು ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುವ ಕುತಂತ್ರ ನಡೆಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಣಧೀರ ಪಡೆ ಉಪಾಧ್ಯಕ್ಷ ಗೋವಿಂದರಾಜು, ಒಕ್ಕಲಿಗರ ವೇದಿಕೆ ಅಧ್ಯಕ್ಷ ಪ್ರಭಾಕರ್, ಕಲಾಸಂಗಮ ಟ್ರಸ್ಟ್ ಅಧ್ಯಕ್ಷ ಎಸ್.ಬಿ. ಲಿಂಗೇಗೌಡ, ರೈತ ಮುಖಂಡ ಶಿವಕುಮಾರ್, ನಾರಾಯಣ, ಹಾಗೂ ಸಂಬಂಧಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.