Advertisement

ಮೂಲಭೂತ ಸೌಲಭ್ಯಕ್ಕೆ ಪಟ್ಟು

05:21 PM Apr 21, 2022 | Team Udayavani |

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧೆಡೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಎಸ್‌ಯುಸಿಐ(ಸಿ) ಪಕ್ಷದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ನಗರೂರು ನಾರಾಯಣರಾವ್‌ ಉದ್ಯಾನವನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಡಾವಣೆಗಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿ, ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಎಲ್ಲ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಪಾಲಿಕೆ ವಿರುದ್ಧ ವಿವಿಧ ಘೋಷಣೆಗಳನ್ನು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಡಿಸಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನಾ ಧರಣಿ ನಡೆಸಿದರು.

ಬಳ್ಳಾರಿ ನಗರವು ಭೌಗೋಳಿಕವಾಗಿ ನಾಲ್ಕೂ ದಿಕ್ಕಿನಲ್ಲಿ ಗಣನೀಯವಾಗಿ ಬೆಳೆದಿದೆ. ಜನಸಂಖ್ಯೆ, ವಾಹನ ದಟ್ಟಣೆ ಭಾರಿ ಗಾತ್ರದಲ್ಲಿ ಹೆಚ್ಚಾಗಿದೆ. ಆದರೆ ಅದಕ್ಕನುಗುಣವಾಗಿ ಮೂಲಭೂತ ಸೌಕರ್ಯಗಳು ಸೃಷ್ಟಿಯಾಗದೆ, ನಗರದ ನಾಗರಿಕರು ದಿನಂಪ್ರತಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತವಾದ ರಸ್ತೆಗಳು, ರಿಂಗ್‌ ರೋಡ್‌ (ವರ್ತುಲ ರಸ್ತೆ) ಕೊರತೆಯಿಂದಾಗಿ, ನಗರದಲ್ಲಿ ಭಾರಿ ವಾಹನಗಳ ಸಂಖ್ಯೆ ಅಧಿಕಗೊಂಡು ಧೂಳಿನ ಮಾಲಿನ್ಯ, ವಾಯುಮಾಲಿನ್ಯ, ಟ್ರಾಫಿಕ್‌ ಸಮಸ್ಯೆ ವಿಪರೀತವಾಗಿದೆ.

ಯೋಜನಾರಹಿತ, ಅಧ್ವಾನದ ಕ್ರಮಗಳಿಂದ ಇಂದಿಗೂ ಸತ್ಯನಾರಾಯಣಪೇಟೆಯ ಕೆಳಸೇತುವೆ ಕೊಳಚೆ ನೀರಿನ ಸೇತುವೆಯಾಗಿದೆ. ಮಳೆ ಬಂದರೆ ಈಜುಕೊಳವಾಗುತ್ತದೆ. ಸುಧಾಕ್ರಾಸ್‌ ಮೇಲ್ಸೇತುವೆ (ಓವರ್‌ ಬ್ರಿಡ್ಜ್)ಗಾಗಿ ಹತ್ತಾರು ವರ್ಷಗಳಿಂದ ಜನ ಕಾಯುತ್ತಲೇ ಇದ್ದರೂ, ಇನ್ನೂವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. 24/7 ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೂರಾರು ಕೋಟಿ ಖರ್ಚು ಮಾಡಿದ್ದರೂ, ಇದೊಂದು ನಿಷಲವಾದ ಯೋಜನೆಯಾಗಿದ್ದು, ವಾರಕ್ಕೊಮ್ಮೆ ನೀರು ಬಂದರೆ ಬಳ್ಳಾರಿ ಜನರ ಅದೃಷ್ಟ. ಅಲ್ಲದೆ ಅನೇಕ ಕಡೆ ನಲ್ಲಿ ನೀರಿನಲ್ಲಿ ಕೊಳಚೆ ನೀರು ಮಿಶ್ರಿತವಾಗಿ ಬರುತ್ತದೆ. ವಿವಿಧ ಬಡವಾಣೆಗಳಲ್ಲಿ ಹೊರಚರಂಡಿ, ಒಳಚರಂಡಿ ನಿಯಮಿತವಾಗಿ ಸ್ವಚ್ಛಗೊಳ್ಳದೆ, ದುರಸ್ತಿಗೊಳ್ಳದೆ ಇರುವುದರಿಂದ ಅವು ದುರ್ನಾತ ಬೀರುತ್ತವೆ ಹಾಗೂ ಚರಂಡಿ ನೀರು ರಸ್ತೆಗಳಿಗೆ ಹರಿಯುವಂತಾಗುತ್ತದೆ. ಸ್ವಚ್ಛತೆ ಅಭಾವದಿಂದ ಮಲೇರಿಯಾ, ಡೆಂಘೀ, ಇನ್ನಿತರೆ ರೋಗಗಳಿಗೆ ನಗರವು ತಾಣವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಉಪಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಆರ್‌. ಸೋಮಶೇಖರ್‌ ಗೌಡ, ಎಂ.ಎನ್. ಮಂಜುಳಾ, ಡಾ| ಎನ್‌. ಪ್ರಮೋದ್‌, ನಿವೃತ್ತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಉದ್ದಿಹಾಳ್‌, ನಿವೃತ್ತ ಉಪನ್ಯಾಸಕ ನರಸಣ್ಣ, ಕೆಯುಡಬ್ಲುಎಸ್‌ ನಿವೃತ್ತ ನೌಕರ ಮುರ್ತುಜಾ ಸಾಬ್‌ ಅವರು ಬಳ್ಳಾರಿ ನಗರ ಸೇರಿ ಕೌಲ್‌ಬಜಾರ್‌, ಕಂಟೋನ್ಮೆಂಟ್‌ ಏರಿಯಾದಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಮಾತನಾಡಿದರು.

Advertisement

ಬಳಿಕ ಪಾಲಿಕೆ ಎಕ್ಸಿಕ್ಯೂಟಿವ್‌ ಇಂಜಿನೀಯರ್‌ ಖಾಜಾಮೊಹಿನುದ್ದೀನ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಮೇಯರ್‌ ಆಯು ಕ್ತರೊಂದಿಗೆ ಕೂಡಲೇ ಚರ್ಚಿಸಿ ಎರಡು ದಿನಗಳ ನಂತರ ಸಭೆ ಕರೆಯಲಾಗುತ್ತದೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಗೋವಿಂದ್‌, ಈಶ್ವರಿ, ಎ.ದೇವದಾಸ್‌, ಶಾಂತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next