Advertisement

ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಅಂಜಳಿಗೆ ಗ್ರಾಮದಲ್ಲಿ ಪ್ರತಿಭಟನೆ

09:07 PM Feb 22, 2020 | Team Udayavani |

ಆಲೂರು: ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ತಾಲೂಕಿನ ಕೆ.ಹೊಸಕೋಟೆ ಹೋಬಳಿ ಅಂಜಳಿಗೆ ಗ್ರಾಸ್ಥರು ಗ್ರಾಮದ ಮುಖ್ಯ ರಸ್ತೆಯಲ್ಲಿ ಧರಣಿ ನಡೆಸಿದರು. ಕಾಡಾನೆ ಹಾವಳಿಯಿಂದ ನಮಗೆ ಮುಕ್ತಿ ದೊರಕಿಸಿ. ನಮ್ಮ ಹಾಗೂ ನಮ್ಮ ಮಕ್ಕಳನ್ನು ನಿರ್ಭೀತಿಯಿಂದ ಬದುಕಲು ಅವಕಾಶ ಕಲ್ಪಿಸಿ ಎಂದು ಘೋಷಣೆಗಳನ್ನು ಕೂಗಿ ಸ್ಥಳಕ್ಕೆ ಅಧಿಕಾರಿಗಳು ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement

ಕೆ. ಹೊಸಕೋಟೆ ಹೋಬಳಿ ಅಂಜಳಿಗೆ ಗ್ರಾಮದ ಗಿರಿಜಾ ಎಂಬುವವರ ಮನೆಯ ಪಕ್ಕದ ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಭತ್ತವನ್ನು ತಿನ್ನಲು ಗುರುವಾರ ತಡರಾತ್ರಿ ಮುಂದಾದ ಒಂಟಿ ಸಲಗವೊಂದು ದಾಳಿ ನಡೆಸಿ ಮನೆ ಬಾಗಿಲು ಮುರಿದಿದ್ದು ಭತ್ತ, ಅಕ್ಕಿ ಜಾನುವಾರುಗಳಿಗೆ ತಂದಿದ್ದ ತೌಡಿನ ಚೀಲವನ್ನು ಎಳೆದು ತಿಂದು ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದೆ. ಪುರಭೈರವನಹಳ್ಳಿಯ ವೆಂಕಟರಮಣೇಗೌಡ ಹಾಗೂ ದಶರಥ ಎಂಬುವವರ ಅಡಿಕೆ ಕಾಫಿ ತೋಟ ಹಾಗೂ ಜೋಳ ಹಾಗೂ ಮೆಣಸಿನ ಗಿಡಗಳಿಗೆ ಅಳವಡಿಸಿರುವ ಕೊಳವೆ ಬಾವಿ ಸಂಪೂರ್ಣವಾಗಿ ಹಾನಿ ಮಾಡಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ನಲುಗಿರುವ ಗ್ರಾಮಸ್ಥರು: ಹಲವು ದಿನಗಳಿಂದ ಸಂಜೆ 6 ಗಂಟೆಯಾಗುತ್ತಲೇ ಸುತ್ತಮುತ್ತಲ ಗ್ರಾಮಗಳ ಮನೆ ಅಂಗಳದಲ್ಲೇ ಪ್ರತ್ಯಕ್ಷವಾಗುವ ಈ ಸಲಗದ ಪುಂಡಾಟಕ್ಕೆ ಗ್ರಾಮಸ್ಥರು ನಲುಗಿದ್ದಾರೆ. ಮನೆಯೊಳಗೆ ಇಟ್ಟ ದವಸ ಧಾನ್ಯಗಳನ್ನು ಹೊರಗೆ ಎಳೆದು ತಿನ್ನುವ ಅಭ್ಯಾಸ ಮಾಡಿಕೊಂಡಿರುವ ಈ ಸಲಗವನ್ನು ಕೂಡಲೇ ಅರಣ್ಯ ಇಲಾಖೆ ಹಿಡಿದು ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅರಣ್ಯ ಇಲಾಖೆ ನಿರ್ಲಕ್ಷ್ಯ: ಕಾಣಿಗೆರೆ ಗ್ರಾಮದ ರೈತ ನಂದಕುಮಾರ್‌ ಮಾತನಾಡಿ, ನಮ್ಮ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದರೂ ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ. ಕೃಷಿ, ಕೂಲಿಕೆಲಸ ಮಾಡಿ ಜೀವನ ಸಾಗಿಸುವ ರೈತರು ಹಾಗೂ ಕಾರ್ಮಿಕರು ಕಾಡಾನೆ ಹಾವಳಿಗೆ ಕಂಗೆಟ್ಟಿದ್ದೇವೆ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ ಎಂದು ಆಪಾದಿಸಿದರು.

ಅರಣ್ಯಾಧಿಕಾರಿಗೆ ತರಾಟೆ: ಪ್ರತಿಭಟನಾ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ರಾಜಪ್ಪ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದಾದರೂ ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಕಾಡಾನೆ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಅಂಜಳಿಗೆ ಗ್ರಾಮದ ಧರಣಿ, ಸುರೇಶ್‌, ಕುಮಾರ್‌, ಪುರಭೈರವನಹಳ್ಳಿ ಗ್ರಾಮದ ದಶರಥ, ವೆಂಕರಾಮ್‌, ರೈತರಾದ ಅಡಿಬೈಲು ಸಂತೋಷ್‌, ಕಾಣಿಗೆರೆ ನಂದಕುಮಾರ್‌, ಎಚ್‌.ಬಿ.ಧರ್ಮರಾಜು, ಕೆ.ಹೊಸಕೋಟೆ ಉಪವಲಯ ಅರಣ್ಯಾಧಿಕಾರಿ ಪ್ರದೀಪ್‌ ಕುಮಾರ್‌, ಸಿಬ್ಬಂದಿ ಜೈಪಾಲ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next