ಹುಣಸೂರು: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಬೆಲೆ ದಿನೇ ದಿನೆ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಇನ್ನು 15 ದಿನದೊಳಗೆ ಕೇಂದ್ರ ವಾಣಿಜ್ಯ ಮಂತ್ರಿಗಳನ್ನು ಇಲ್ಲಿಗೆ ಕರೆತಂದು ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಎಚ್ಚರಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್. ನಗರ, ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕುಗಳಲ್ಲಿ 85 ಸಾವಿರ ಹೆಕ್ಟೇರ್ ಭೂಮಿಯಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ತಂಬಾಕು ಬೆಳೆಯೇ ಪ್ರಮುಖವಾಗಿದ್ದು, ಸುಮಾರು 56 ಸಾವಿರ ಲೈಸೆನ್ಸ್‌ದಾರು, 36 ಸಾವಿರ ಅನಧಿಕೃತ ಬೆಳೆಗಾರರು ಇದ್ದಾರೆ.
ಈ ಕುಟುಂಬಗಳು ತಂಬಾಕು ಬೆಳೆಯನ್ನೇ ಅವಲಂಬಿಸಿದ್ದು, ಪ್ರತಿವರ್ಷ ಉತ್ಪಾದನಾ ವೆಚ್ಚ ಹೆಚ್ಚುತ್ತಲೇ ಇದೆ. ಬೆಲೆ ಮಾತ್ರ ಏರಿಳಿಕೆಯಾಗುತ್ತಿದೆ. ಮೈಸೂರು ಭಾಗದ ತಂಬಾಕಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದೆ. ಆದರೆ ಬೆಲೆ ಮಾತ್ರ ಹೆಚ್ಚುತ್ತಿಲ್ಲ, ಮಾರುಕಟ್ಟೆಯಲ್ಲಿ ದರ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆಂದು ತಿಳಿಸಿದರು.
ಸ್ಪಂದಿಸದ ಸಂಸದ: ಕಳೆದ ಲೋಕಸಭಾ ಚುನಾವಣೆ ವೇಳೆ ಎಲ್ಲಾ ಬೆಳೆಗಾರರಿಗೆ ಲೈಸೆನ್ಸ್ ಕೊಡಿಸುವ ಹಾಗೂ ಉತ್ತಮ ಬೆಲೆ ಕೊಡಿಸುವುದಾಗಿ ಹಾಗೂ ವಿದೇಶಿ ಕಂಪನಿಗಳ ನೇರ ಖರೀದಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದ ಸಂಸದ ಪ್ರತಾಪ್ ಸಿಂಹ, ತಂಬಾಕು ಬೆಲೆ ಕುಸಿದಿದ್ದರೂ ಹರಾಜು ಮಾರುಕಟ್ಟೆಗಳಿಗೆ ಭೇಟಿ ನೀಡಿ ರೈತರಿಗೆ ಕನಿಷ್ಠ ಸ್ಪಂದನೆ ತೋರಿಲ್ಲ. ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದರು.
ಸರಾಸರಿ 200 ರೂ. ಬೆಲೆ ಕಲ್ಲಿಸಿ: ಇಡೀ ಕುಟುಂಬದ ಮಂದಿ ದುಡಿದು ಬೆಳೆಯುವ ತಂಬಾಕಿಗೆ ಸರಾಸರಿ ಕೆ.ಜಿ.ಗೆ 200 ರೂ. ಸಿಕ್ಕರೆ ಹಾಗೂ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಂಪನಿಗಳವರು ಹರಾಜಿನಲ್ಲಿ ಭಾಗವಹಿಸಿದರೆ ಮಾತ್ರ ಬೆಳೆಗಾರರು ಸಂಕಷ್ಟದಿಂದ ಪಾರಾಗಬಹುದು. ಹುಣಸೂರು ಕ್ಷೇತ್ರದಲ್ಲಿ ಸುಮಾರು 50 ಸಾವಿರ ತಂಬಾಕು ಬೆಳೆಗಾರರ ಕುಟುಂಬವಿದ್ದು,
ಇಲ್ಲಿಗೆ ವಾಣಿಜ್ಯ ಮಂತ್ರಿಗಳನ್ನು ಕರೆ ತಂದು ಉತ್ತಮ ಬೆಲೆ ಕೊಡಿಸುವ ಹಾಗೂ ಭರವಸೆಯಂತೆ ಕಾರ್ಡ್ ದಾರರಿಗೆ ಲೈಸೆನ್ಸ್ ಕೊಡಿಸದಿದ್ದಲ್ಲಿ ಫೌಂಡೇಷನ್ ಬೆಳೆಗಾರರೊಂದಿಗೆ ಸೇರಿ ಆಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಗೋಷ್ಟಿಯಲ್ಲಿ ರಾಕೇಶ್‌ರಾವ್, ಬೆಳೆಗಾರರಾದ ಗೋವಿಂದೇಗೌಡ, ಅರವಿಂದ್ ಕುಮಾರ್, ಸ್ವಾಮಿಗೌಡ, ಯೋಗೇಂದ್ರ ಇತರರಿದ್ದರು.