ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಮತ್ತು ಕೊರೊನಾ ಸೋಂಕು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ಸರ್ಕಾರದ ಧೋರಣೆ ವಿರೋಧಿಸಿ ಮಾ.15 ರಿಂದ ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗಂಜಿಗುಂಟೆ ಲಕ್ಷ್ಮೀದೇವಮ್ಮ ಹಾಗೂ ಪ್ರಧಾನ ಕಾರ್ಯದರ್ಶಿ ಬಾಗೇಪಲ್ಲಿ ರತ್ನಮ್ಮ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರದ ಆದೇಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ರಾಜ್ಯಾದ್ಯಂತ ಕೆಲಸದ ಒತ್ತಡದಿಂದ 35 ಹಾಗೂ ಕೊರೊನಾ ಸೋಂಕು ನಿಯಂತ್ರಿಸುವ ಸಂದರ್ಭದಲ್ಲಿ 28 ಮಂದಿ ಅಂಗನವಾಡಿ ನೌಕರರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. 173 ಅಂಗನವಾಡಿ ನೌಕರರು ಕೊರೊನಾ ಸೋಂಕಿನ ಪ್ರಭಾವದಿಂದ ತಮ್ಮ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ.
ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ ಪರಿಣಾಮ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದ ಮೇರೆಗೆ ವೇತನ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯ ನೇಮಕ, ಅಂಗನವಾಡಿ ಸಹಾಯಕರಿಗೆ ವೇತನ ತಾರತಮ್ಯ ಹಾಗೂ ನಿವೃತ್ತಿ ಸೌಲಭ್ಯವನ್ನು ಒದಗಿಸಲು ರಾಜ್ಯ ಬಜೆಟ್‍ನಲ್ಲಿ ಸೇರಿಸಲಾಗುವುದೆಂದು ನೀಡಿದ ಭರವಸೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಇಲಾಖೆಯ ಶಿಫಾರಸ್ಸುಗಳನ್ನು ಪುರಸ್ಕರಿಸಿ ಬಜೆಟ್‍ನಲ್ಲಿ 339.48 ಕೋಟಿ ರೂಗಳ ಮೊತ್ತವನ್ನು ನೀಡಿದರೆ ರಾಜ್ಯದ 1 ಲಕ್ಷ 30 ಸಾವಿರ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು. ಆದರೇ ಸರ್ಕಾರ ಯಾವುದೇ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ 2016 ರಿಂದ ಇದುವರೆಗೆ 7304 ಅಂಗನವಾಡಿ ನೌಕರರು ನಿವೃತ್ತಿಯಾಗಿದ್ದಾರೆ. ಅವರಿಗೆ ಕೊಡಬೇಕಾದ ಇಡಗಂಟು ಸಹ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ಬಜೆಟ್ ಮಂಡಿಸಿದ ಮಾತ್ರಕ್ಕೆ ಮಹಿಳೆಯರ ಕಲ್ಯಾಣ ಸಾಧ್ಯವೇ? ಎಂದು ಪ್ರಶ್ನಿಸಿರುವ ಅವರು ಬಜೆಟ್ ಅಂತಿಮಗೊಳಿಸುವ ಮುನ್ನ ಶಿಫಾರಸ್ಸುಗಳನ್ನು ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಮಾ.15 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುತ್ತಿದ್ದು ಹೆಚ್ಚುವರಿಯಾಗಿ ಮಾಡುತ್ತಿದ್ದ ಇ.ಸರ್ವೇ,ಆರ್.ಡಿ.ಪಿ.ಆರ್ ಸರ್ವೇ,ಬಿಪಿಎಲ್ ಕಾರ್ಡ್ ಆರ್.ಸಿ.ಹೆಚ್.ಸರ್ವೇ, ಭಾಗ್ಯಲಕ್ಷ್ಮೀ, ಮಾತೃವಂದನಾ, ಮಾತೃಶ್ರೀ,ಸ್ತ್ರೀಶಕ್ತಿ ಹಾಗೂ ಚುನಾವಣೆ ಕಾರ್ಯಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.