Advertisement

ಆದಿವಾಸಿಗಳಿಂದ ಪ್ರತಿಭಟನೆ; ಜೈಲ್‌ಭರೋ ಆಂದೋಲನ ಎಚ್ಚರಿಕೆ

11:00 AM Mar 15, 2018 | Karthik A |

ಮಡಿಕೇರಿ: ವಸತಿ ಹೀನ ಆದಿವಾಸಿಗಳಿಗೆ ವಸತಿ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಹಾಡಿಗಳ ಆದಿವಾಸಿಗಳು ನಗರದ ಫೀ|ಮಾ| ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಂದಿನ 15 ದಿನಗಳೊಳಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೈಲ್‌ ಭರೋ ಚಳುವಳಿ ಹಮ್ಮಿಕೊಳ್ಳುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು. 

Advertisement

ಜಿಲ್ಲಾ ವ್ಯಾಪ್ತಿಯ ಹಾಡಿಗಳಲ್ಲಿ, ಲೈನ್‌ ಮನೆಗ‌ಳಲ್ಲಿ ಹತ್ತು ಸಾವಿರಕ್ಕು ಹೆಚ್ಚಿನ ನಿರ್ವಸತಿಗರಿದ್ದಾರೆ. ನಿರಾಶ್ರಿತರಿಗೆ ವಸತಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು ಆಡಳಿತ ವ್ಯವಸ್ಥೆಯಿಂದ  ಸೂಕ್ತ ಸ್ಪಂದನ ದೊರಕಿಲ್ಲವೆಂದು ಸಮಿತಿಯ ಪ್ರಮುಖರು ಆರೋಪಿಸಿದರು.

ಹಾಡಿ, ಕಾಲೋನಿ, ಪೈಸಾರಿ ಎನ್ನುವ ಹೆಸರಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಡಗಿನ ಆದಿವಾಸಿಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೋಟದ ಲೈನ್‌ ಮನೆಗಳಲ್ಲಿ ಮೂಲಭೂತ  ಸೌಲಭ್ಯಗಳಿಲ್ಲದೆ ಕಡಿಮೆ  ಕೂಲಿಗೆ ಆದಿವಾಸಿಗಳು ದುಡಿಯುತ್ತಿದ್ದಾರೆ. ಮಾಲಕ ನೀಡಿದ ಸಾಲದ ಕುಣಿಕೆಗೆ ಜೋತು ಬಿದ್ದ ಆದಿವಾಸಿಗಳು ಜೀತಕ್ಕೂ ಒಳಗಾಗಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ವೈ.ಕೆ. ಗಣೇಶ್‌ ಅಸಮಾಧಾನ ವ್ಯಕ್ತಪಡಿಸಿದರು. 

ಕೊಡಗಿನ ಆದಿವಾಸಿಗಳು ನಿರಂತರ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು, ದಿಡ್ಡಳ್ಳಿ ಹೋರಾಟದ ಸಂದರ್ಭ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ತೋಟದ ಮನೆಗಳ ಲೈನ್‌ ಮನೆಗಳಲ್ಲಿರುವ ವಸತಿ ಹೀನರ ಗಣತಿಯನ್ನು ಪಡೆಯಲು ಪ್ರಯತ್ನ ನಡೆಸಿದ್ದು, ಲೈನ್‌ಮನೆಗಳಲ್ಲಿ ಎಷ್ಟು ಜನರಿದ್ದಾರೆ ಎನ್ನುವ ಯಾವುದೇ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ. ಅಲ್ಲದೆ ನಿರಂತರ ಗಿರಿಜನ ವಿಶೇಷ ಘಟಕದ ಅರ್ಜಿಯನ್ನು ಸಲ್ಲಿಸಿದ್ದರು, ಯಾವುದೇ ಉತ್ತರವನ್ನು ನೀಡದೆ ಇಲ್ಲಿಯವರೆಗೆ ಆದಿವಾಸಿಗಳಿಗೆ ವಸತಿ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗಣೇಶ್‌ ಆರೋಪಿಸಿದರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಕಾರರು ಸೂಕ್ತ ಕ್ರಮಕ್ಕೆ 15 ದಿನಗಳ ಗಡುವು ನೀಡಿದರು.

ಬೇಡಿಕೆಗಳು
ಲೈನ್‌ಮನೆಗಳಲ್ಲಿರುವ ಆದಿವಾಸಿಗಳ ಗಣತಿ ವಿವರ ಪ್ರಕಟಗೊಳಿಸಿ ಅರ್ಹರಿಗೆಲ್ಲ ವಸತಿ ಸೌಲಭ್ಯ ಒದಗಿಸಬೇಕು, ಲೈನ್‌ ಮನೆಗಳಲ್ಲಿರುವ ಆದಿವಾಸಿಗಳ ಸಾಲದ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು, ಲೈನ್‌ ಮನೆಗಳಲ್ಲಿರುವ ಆದಿವಾಸಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಖಾತರಿಗೊಳಿಸಬೇಕು, ಆದಿವಾಸಿಗಳ ಹಾಡಿ, ಊರು, ಕಾಲನಿಗಳಿಗೆ ರಸ್ತೆ, ನೀರು, ವಿದ್ಯುತ್‌ ಸೌಲಭ್ಯ ಒದಗಿಸಬೇಕು, ಆದಿವಾಸಿಗಳ ಜನರಿಗೆ ಶ್ಮಶಾನ ಸೌಕರ್ಯ ವ್ಯವಸ್ಥೆಗೊಳಿಸಬೇಕು, ಆದಿವಾಸಿ ಯುವಕರಿಗೆ ಉದ್ಯೋಗಕ್ಕಾಗಿ ವಿಶೇಷ ಗಣತಿ ನಡೆಸಿ ವಿಶೇಷ ನೇಮಕಾತಿ ಕ್ರಮಕೈಗೊಳ್ಳಬೇಕು, ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ ನೀಡಿ ಆಶ್ರಮ ಶಾಲೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು, ಗುರುತಿನ ಚೀಟಿ ಇಲ್ಲದವರಿಗೆ ಅದಾಲತ್‌ ಮೂಲಕ ಮತದಾರರ ಚೀಟಿ, ಆಧಾರ್‌, ರೇಷನ್‌ ಕಾರ್ಡುಗಳನ್ನು ನೀಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು. ರಾಜ್ಯ ಸಮಿತಿ ಸದಸ್ಯರಾದ ಜೆ.ಆರ್‌. ಪ್ರೇಮಾ, ಜಿಲ್ಲಾಧ್ಯಕ್ಷರಾದ ಬರಡಿ ರವಿ, ಪ್ರಮುಖರಾದ ಅಣ್ಣಪ್ಪ, ಅಶೋಕ, ಮುರುಗೇಶ್‌, ಕಾವೇರಿ, ಮಿಲನ್‌, ಪಿ.ಎಂ. ಮಣಿ, ದೇವರಪುರ ಪ್ರೇಮಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next