Advertisement

ರಸ್ತೆ ದುರಸ್ತಿಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

05:29 PM Dec 04, 2018 | |

ಚಿತ್ರದುರ್ಗ: ಜಿಲ್ಲಾದ್ಯಂತ ರಸ್ತೆಯ ತಗ್ಗು, ಗುಂಡಿಗಳನ್ನು ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ, ಕರಿಕೆರೆ, ಜಾಜೂರು ಮಾರ್ಗವಾಗಿ ಕಲ್ಯಾಣದುರ್ಗದ ರಸ್ತೆಯಲ್ಲಿ ನೂರಾರು ಗುಂಡಿಗಳು ಉಂಟಾಗಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಶೇಂಗಾ ಕಟಾವು ಮಾಡುತ್ತಿದ್ದು ಎತ್ತಿನ ಗಾಡಿಗಳಲ್ಲಿ ಶೇಂಗಾ ಬಳ್ಳಿ ತುಂಬಿಕೊಂಡು ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲಾಗಿದೆ. ಆ ರಸ್ತೆ ಸೇರಿದಂತೆ ಜಿಲ್ಲಾದ್ಯಂತ ತಗ್ಗು, ಗುಂಡಿಗಳು ಬಿದ್ದಿರುವ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿಸಿ ಅನುಕೂಲ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ಮೇವಿನ ಅಭಾವದಿಂದಾಗಿ ಈಗಾಗಲೇ ರೈತರು ಜಾನುವಾರುಗಳನ್ನು ಮಾರಾಟ ಮಾಡಿ ಗುಳೆ ಹೋಗುತ್ತಿದ್ದು ಸ್ಥಳದಲ್ಲೇ ಉದ್ಯೋಗ ಒದಗಿಸುವ ಕಾರ್ಯ ಮಾಡಬೇಕು. ಕೆರೆಗಳ ಹೂಳೆತ್ತುವುದು ಸೇರಿದಂತೆ ರೈತ ಪರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ನೀಡಬೇಕು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಎಲ್ಲ ಕಡೆ ಚೆಕ್‌ಡ್ಯಾಂ, ಗೋಕಟ್ಟೆ, ಬದುಗಳ ನಿರ್ಮಾಣ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರು.  ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಮಲ್ಲಾಪುರ ತಿಪ್ಪೇಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಕೆ.ಸಿ. ಹೊರಕೇರಪ್ಪ, ಪಲ್ಲವಗೆರೆ ತಿಪ್ಪೇಸ್ವಾಮಿ, ಜೆ.ಎನ್‌. ಕೋಟೆ ಲಿಂಗಪ್ಪ, ಹಂಪಣ್ಣ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next